ನಗರದ 50 ಲಕ್ಷ ಬಡವರು ಇದುವರೆಗೆ ವಿದ್ಯುತ್ ಸಂಪರ್ಕ ಪಡೆದಿಲ್ಲ: ವಿದ್ಯುತ್ ಸಚಿವಾಲಯ
ಹೊಸದಿಲ್ಲಿ, ಅ. 17: ಪ್ರಧಾನಿ ಅವರು 2017 ಸೆಪ್ಟಂಬರ್ 25ರಂದು ಸೌಭಾಗ್ಯ ಅಥವಾ ಪ್ರಧಾನ ಮಂತ್ರಿ ಸಹಜ್ ಬಿಜಿಲಿ ಹರ್‌ಘರ್ ಯೋಜನೆ ಲೋಕಾರ್ಪಣೆಗೊಳಿಸಿ ದೇಶದಲ್ಲಿ ನಾಲ್ಕು ಕೋಟಿ ಮನೆಗಳು ಇದುವರೆಗೆ ವಿದ್ಯುತ್ ಸಂಪರ್ಕ ಪಡೆದಿಲ್ಲ ಎಂದು ಹೇಳಿದ್ದರು. ಆದರೆ, ವಿದ್ಯುತ್ ಸಚಿವಾಲಯ ಈ ಹೇಳಿಕೆಗೆ ವಿರೋಧಾಭಾಸವಾಗಿ ದೇಶದಲ್ಲಿ ಮೂರು ಕೋಟಿ ಜನರು ವಿದ್ಯುತ್ ಸಂಪರ್ಕ ಪಡೆದಿಲ್ಲ ಎಂದು ಹೇಳಿದೆ.
ಪಿಐಬಿ ವೆಬ್‌ಸೈಟ್‌ನಲ್ಲಿ ಸೆಪ್ಟಂಬರ್ 25ರ ಪ್ರಕಟಣೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ ಬಗ್ಗೆ ವಿವರಗಳನ್ನು ನೀಡಲಾಗಿದೆ. ಅದರಲ್ಲಿ ಹೀಗೆ ಹೇಳಲಾಗಿದೆ: ಪ್ರಸ್ತುತ ವಿದ್ಯುತ್ ಸಂಪರ್ಕ ಇಲ್ಲದ ನಾಲ್ಕು ಕೋಟಿ ಮನೆಗಳಿಗೆ ಪ್ರಧಾನ್ ಮಂತ್ರಿ ಸಹಜ್ ಬಿಜಿಲಿ ಹರ್‌ಘರ್ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿದೆ.
ಇದಕ್ಕಾಗಿ 16,000 ಕೋ. ರೂ ವೆಚ್ಚ ಮಾಡಲಾಗಿದೆ. ಈ ವಿದ್ಯುತ್ ಸಂಪರ್ಕವನ್ನು ಬಡವರಿಗೆ ಉಚಿತವಾಗಿ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ. ಆದಾಗ್ಯೂ, ವಿದ್ಯುತ್ ಸಚಿವಾಲಯದ ಅಕ್ಟೋಬರ್ 11ರ ಅಧೀಕೃತ ಜ್ಞಾಪನಾಪತ್ರದಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 17.96 ಕೋಟಿ ಗ್ರಾಮೀಣ ಮನೆಗಳು ಇವೆ ಎಂದು ಹೇಳಲಾಗಿದೆ.
ಉಜ್ವಲ ಯೋಜನೆ ಅಡಿಯಲ್ಲಿ ಅಸಂಖ್ಯಾತ ಬಿಪಿಎಲ್ ಕಾರ್ಡ್‌ದಾರರಿಗೆ ವಿದ್ಯುತ್ ಸಂಪರ್ಕ ಮಂಜೂರು ಮಾಡಲಾಗಿತ್ತು. ಆದರೆ, ಇನ್ನು ಕೂಡ 1.79 ಕೋಟಿ ಕುಟುಂಬಗಳಿಗೆ ಸೌಲಭ್ಯ ನೀಡಬೇಕಾಗಿದೆ.
2.81 ಕೋಟಿ ಗ್ರಾಮೀಣ ಮನೆಗಳಿಗೆ ಇನ್ನಷ್ಟೆ ವಿದ್ಯುತ್ ಸಂಪರ್ಕ ನೀಡಬೇಕಾಗಿದೆ. ನಗರದಲ್ಲಿ 50 ಲಕ್ಷ ಮನೆಗಳು ಇದುವರೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿಲ್ಲ ಎಂದು ದಾಖಲೆಗಳು ತಿಳಿಸಿವೆ.