×
Ad

ಮೌಲಾನ ಅಂಝರ್ ಶಾ ಖಾಸಿಮಿ ನಿರಪರಾಧಿ: ದಿಲ್ಲಿ ಕೋರ್ಟ್ ತೀರ್ಪು

Update: 2017-10-17 21:23 IST

ಭಯೋತ್ಪಾದನೆ ಆರೋಪದಲ್ಲಿ ಜೈಲುಪಾಲಾಗಿದ್ದ ಬೆಂಗಳೂರಿನ ವಿದ್ವಾಂಸ

ಹೊಸದಿಲ್ಲಿ, ಅ.17: ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದಾರೆ ಹಾಗು ಅಲ್ ಖಾಯಿದಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ದಿಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ವಿದ್ವಾಂಸ ಮೌಲಾನ ಅಂಝರ್ ಶಾ ಖಾಸಿಮಿ ನಿರಪರಾಧಿ ಎಂದು ದಿಲ್ಲಿ ಪಟಿಯಾಲ ಕೋರ್ಟ್ ತೀರ್ಪಿತ್ತಿದೆ. ಬೆಂಗಳೂರಿನಿಂದ ಬಂಧನಕ್ಕೊಳಗಾಗಿದ್ದ ಮೌಲಾನಾ ಖಾಸಿಮಿ 2016ರ ಜನವರಿಯಿಂದ ಜೈಲಿನಲ್ಲಿದ್ದರು. ದಿಲ್ಲಿ ನ್ಯಾಯಾಲಯದ ಈ ತೀರ್ಪಿನಿಂದ ದಿಲ್ಲಿ ಪೊಲೀಸ್ ವಿಶೇಷ ಸೆಲ್ ಗೆ ತೀವ್ರ ಹಿನ್ನಡೆಯಾಗಿದೆ.

ದಿಲ್ಲಿ ಪೊಲೀಸ್ ವಿಶೇಷ ಸೆಲ್ ಸಲ್ಲಿಸಿದ್ದ ಸಾಕ್ಷ್ಯಗಳನ್ನು ಗಮನಿಸಿದ ನ್ಯಾಯಾಲಯವು ಈ ಪ್ರಕರಣ 'ವಿಚಾರಣೆಗೂ ಅನರ್ಹ' ಎಂದು ಖಾಸಿಮಿಯವರನ್ನು ದೋಷಮುಕ್ತಗೊಳಿಸಿ ತೀರ್ಪಿತ್ತಿದೆ.

ದೇಶವಿರೋಧಿ ಕೃತ್ಯಗಳಲ್ಲಿ ಖಾಸಿಮಿ ಭಾಗಿಯಾಗಿದ್ದಾರೆ, ಇಂತಹ ಕೃತ್ಯಗಳನ್ನು ಮಾಡಲು ಯುವಕರನ್ನು ಪ್ರೇರೇಪಿಸುತ್ತಿದ್ದಾರೆ ಹಾಗು ಇವರಿಗೆ ಭಯೋತ್ಪಾದಕ ಸಂಘಟನೆ ಅಲ್ ಖಾಯ್ದಾದೊಂದಿಗೆ ಸಂಪರ್ಕವಿದೆ ಎಂದು ಪೊಲೀಸರು ಆರೋಪಿಸಿದ್ದರು. ಅಲ್ ಖಾಯ್ದಾದೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕರು ವಿಚಾರಣೆಯ ವೇಳೆ ಖಾಸಿಮಿಯವರ ಬಗ್ಗೆ ಮಾಹಿತಿ ನೀಡಿದ್ದರು ಎಂದೂ ಪೊಲೀಸರು ಆರೋಪಿಸಿದ್ದರು.

ಈ ಪ್ರಕರಣದಲ್ಲಿ ದಿಲ್ಲಿ ಪಟಿಯಾಲ ಹೌಸ್ ಕೋರ್ಟ್ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಸಿದ್ಧಾರ್ಥ್ ಶರ್ಮಾ ಖಾಸಿಮಿಯವರನ್ನು ಆರೋಪಮುಕ್ತಗೊಳಿಸಿ ತೀರ್ಪಿತ್ತಿದ್ದಾರೆ. ಪ್ರಕರಣವನ್ನು ನ್ಯಾಯಾಲಯವು ವಜಾಗೊಳಿಸಿರುವುದು ಆರೋಪಗಳು ಕಪೋಲಕಲ್ಪಿತವಾಗಿದ್ದವು ಎನ್ನುವುದಕ್ಕೆ ನಿದರ್ಶನವಾಗಿದೆ. ಎರಡು ಪ್ರಮುಖ ಅಂಶಗಳನ್ನು ಪೊಲೀಸರ ಪ್ರಕರಣವು ಆಧರಿಸಿತ್ತು. ಬೆಂಗಳೂರಿನಲ್ಲಿ ಎಕ್ಯೂಐಎಸ್‌ನ ಸದಸ್ಯನೋರ್ವ ಇನ್ನೋರ್ವ ಉಗ್ರನನ್ನು ಭೇಟಿಯಾಗಲು ಕಾಸಿಮಿ ನೆರವಾಗಿದ್ದರು ಎನ್ನುವುದು ಒಂದು ಪ್ರಮುಖ ಅಂಶವಾಗಿದೆ. ಈ ಇಬ್ಬರ ಪೈಕಿ ಓರ್ವ 2015,ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಬಂಧಿತನಾಗಿದ್ದ ಮತ್ತು ಈಗಲೂ ಜೈಲಿನಲ್ಲಿದ್ದಾನೆ. ತಾವು ಪತ್ರಗಳನ್ನು ವಿನಿಮಯಿಸಿಕೊಂಡಿದ್ದೆವು, ಆದರೆ ಅವರನ್ನು ಹಾಜರುಪಡಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದರು. ಜನರನ್ನು ಎಕ್ಯೂಐಎಸ್‌ಗೆ ಸೇರುವಂತೆ ಪ್ರಚೋದಿಸುವ ಉಗ್ರ ಪ್ರವಚನಗಳನ್ನು ಕಾಸಿಮಿ ನೀಡುತ್ತಿದ್ದರು ಎನ್ನುವುದು ಎರಡನೆಯ ಪ್ರಮುಖ ಅಂಶ. ಆದರೆ ತಮ್ಮ ಆರೋಪವನ್ನು ಸಮರ್ಥಿಸುವ ಒಂದೇ ಒಂದು ಸಾಕ್ಷವನ್ನೂ ಒದಗಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ ಎಂದು ಖಾಸಿಮಿಯವರ ವಕೀಲ ಅಡ್ವಕೇಟ್ ಖಾನ್ ಹೇಳಿದ್ದಾರೆ.

ಮೌಲಾನ ಖಾಸಿಮಿಯವರ ವಿರುದ್ಧದ ಯಾವುದೇ ಆರೋಪಗಳು ಸಾಬೀತಾಗಿಲ್ಲ. ವಿಶೇಷ ಸೆಲ್ ಈ ಬಗ್ಗೆ ಯಾವುದೇ ಹೇಳಿಕೆಯನ್ನು ಸಲ್ಲಿಸಿಲ್ಲ. ಮುಹಮ್ಮದ್ ಆಸಿಫ್ , ಅಬ್ದುಸ್ಸಮಿ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂದವರು ಹೇಳಿದ್ದಾರೆ.

ಮೌಲಾನ ಖಾಸಿಮಿ, ಅಬ್ದುಸ್ಸಮಿ, ಝಫರ್ ಮಸೂದ್, ಅಬ್ದುರ್ರಹ್ಮಾನ್ ಹಾಗು ಮುಹಮ್ಮದ್ ಆಸಿಫ್ ಎಂಬವರ ವಿರುದ್ಧ ದಿಲ್ಲಿ ಪೊಲೀಸ್ ವಿಶೇಷ ಸೆಲ್ 2016ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮೌಲಾನ ಖಾಸಿಮಿ ಖುಲಾಸೆಗೊಂಡಿದ್ದರೆ ಇತರ ನಾಲ್ವರು ವಿಚಾರಣೆಯನ್ನು ಎದುರಿಸಬೇಕಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಬೈ ಜಮೀಯ್ಯತುಲ್ ಉಲಮಾ ಮಹಾರಾಷ್ಟ್ರ ಕಾನೂನು ಸಹಾಯ ಸಮಿತಿಯ ಮುಖ್ಯಸ್ಥ ಗುಲ್ಝಾರ್ ಆಝ್ಮಿ, ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ಇತರರಿಗೂ ಶೀಘ್ರ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮೀಯ್ಯತುಲ್ ಉಲಮಾ ಹಿಂದ್ ಅಧ್ಯಕ್ಷ ಮೌಲಾನ ಸೈಯದ್ ಅರ್ಷದ್ ಮದನಿ, “ನ್ಯಾಯಾಲಯದ ತೀರ್ಪಿನಿಂದ ಹರ್ಷಗೊಂಡಿದ್ದೇನೆ. ಮುಸ್ಲಿಮರ ಹೆಸರಿಗೆ ಮಸಿ ಬಳಿಯಲು ತನಿಖಾ ತಂಡ ಪ್ರಯತ್ನಿಸಿದೆ. ಕೊನೆಗೂ ನ್ಯಾಯ ಜಯಿಸುತ್ತದೆ ಎನ್ನುವುದಕ್ಕೆ ಈ ತೀರ್ಪು ಉದಾಹರಣೆ. ಈ ಮೂಲಕ ನ್ಯಾಯಾಂಗದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News