ಇರಾನ್-ಸ್ಪೇನ್ ಕ್ವಾರ್ಟರ್ ಫೈನಲ್ ಗೆ

Update: 2017-10-17 17:53 GMT

ಗುವಾಹತಿ, ಅ.17: ಫಿಫಾ ಅಂಡರ್ -17 ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ಇರಾನ್ ಮತ್ತು ಸ್ಪೇನ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

  ಗೋವಾದ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಇರಾನ್ 2-1 ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತು. ಇರಾನ್ ತಂಡದ ಮುಹಮ್ಮದ್ ಶರೀಫಿ ಮತ್ತು ಅಲ್ಲಾರ್ ಸಯ್ಯದ್ ಎರಡು ಗೋಲು ದಾಖಲಿಸಿ ಇರಾನ್‌ಗೆ ಕ್ವಾರ್ಟರ್ ಫೈನಲ್ ಹಾದಿ ಸುಗಮಗೊಳಿಸಿದರು. ಮೆಕ್ಸಿಕೊ ತಂಡದ ರಾಬರ್ಟ್ ಡೆ ಲಾ ರೋಸಾ ಏಕೈಕ ಗೋಲು ದಾಖಲಿಸಿದರು. ಮುಹಮ್ಮದ್ ಶರೀಫಿ 7ನೆ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಇರಾನ್ ತಂಡದ ಗೋಲು ಖಾತೆ ತೆರೆದರು. 11ನೆ ನಿಮಿಷದಲ್ಲಿ ಅಲ್ಲಾರ್ ಗೋಲು ದಾಖಲಿಸಿ ಇರಾನ್‌ಗೆ 2-0 ಮುನ್ನಡೆ ದೊರಕಿಸಿಕೊಟ್ಟರು. 37ನೆ ನಿಮಿಷದಲ್ಲಿ ಮೆಕ್ಸಿಕೊ ತಂಡದ ರಾಬರ್ಟ್ ಡೆ ಲಾ ರೋಸಾ ಗೋಲು ಕಬಳಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿದ ಇರಾನ್ ದ್ವಿತೀಯಾರ್ಧದಲ್ಲೂ ಮುನ್ನಡೆ ಕಾಯ್ದುಕೊಂಡು ಗೆಲುವಿನ ನಗೆ ಬೀರಿತು.

ಫ್ರಾನ್ಸ್‌ನ್ನು ಮಣಿಸಿದ ಸ್ಪೇನ್

ಗುವಾಹತಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಇನ್ನೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್‌ನ್ನು 2-1 ಅಂತರದಲ್ಲಿ ಬಗ್ಗು ಬಡಿದ ಸ್ಪೇನ್ ಕ್ವಾರ್ಟರ್ ಫೈನಲ್‌ಗೇರಿದೆ.

  ಸ್ಪೇನ್ ತಂಡದ ಅಬೆಲ್ ರುಯ್ಝ ಕೊನೆಯ ನಿಮಿಷದಲ್ಲಿ ಬಾರಿಸಿದ ಗೋಲು ಸ್ಪೇನ್‌ಗೆ ಕ್ವಾರ್ಟರ್ ಫೈನಲ್‌ಗೇರಲು ನೆರವಾಗಿದೆ. ಫ್ರಾನ್ಸ್‌ನ ಲೆನ್ನಿ ಪಿಂಟರ್ 34ನೆ ನಿಮಿಷದಲ್ಲಿ ತಂಡದ ಗೋಲು ಖಾತೆ ತೆರೆದರು. 44ನೆ ನಿಮಿಷದಲ್ಲಿ ಸ್ಪೇನ್‌ನ ಜುಯಾನ್ ಮಿರಾಂಡ 1-1 ಸಮಬಲ ಸಾಧಿಸಿದರು. 90ನೆ ನಿಮಿಷದಲ್ಲಿ ಅಬೆಲ್ ರುಯ್ಝಿ ಗೋಲು ಬಾರಿಸಿ ಸ್ಪೇನ್‌ಗೆ ಗೆಲುವು ತಂದು ಕೊಟ್ಟರು.

ಇಂದಿನ ಪಂದ್ಯಗಳು

ಘಾನಾ -ನೈಜರ್

ಸ್ಥಳ : ಮುಂಬೈ, ಸಮಯ: ಸಂಜೆ 5:00 ಗಂಟೆಗೆ

ಬ್ರೆಝಿಲ್-ಹೊಂಡುರಾಸ್

ಸ್ಥಳ: ಕೊಚ್ಚಿ , ಸಮಯ: ರಾತ್ರಿ 8:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News