ಸೆಕೆಂಡುಗಳಲ್ಲಿ ಮಲೇರಿಯಾ ಪತ್ತೆಹಚ್ಚಲು ಬಂದಿದೆ ಹೊಸ ಸಾಧನ…

Update: 2017-10-20 12:56 GMT

ಕೊಲ್ಕತ್ತಾ, ಅ 20:  ಕೊಲ್ಕತ್ತಾದ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ  ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿ, ಶಿಬ್ಪುರ್ ಇಲ್ಲಿನ ಸಂಶೋಧಕರ ತಂಡವೊಂದು ಮಲೇರಿಯಾ ಪತ್ತೆ ಹಚ್ಚುವ ಹೊಸ ಸಾಧನವೊಂದನ್ನು ಕಂಡು ಹಿಡಿದಿದೆ. ಇದು ಕೆಲವೇ ಸೆಕೆಂಡುಗಳಲ್ಲಿ  ವ್ಯಕ್ತಿಯೊಬ್ಬರಿಗೆ ಮಲೇರಿಯಾ ಇದೆಯೇ ಅಥವಾ ಇಲ್ಲವೇ ಎಂದು ಪತ್ತೆ ಹಚ್ಚುತ್ತದೆ ಎನ್ನಲಾಗಿದೆ. ಕೆಲವೊಂದು ಮಾರ್ಪಾಟುಗಳೊಂದಿಗೆ ಈ ಸಾಧನವು ಡೆಂಗ್ ಜ್ವರವನ್ನೂ ಪತ್ತೆ ಹಚ್ಚಬಹುದಾಗಿದ್ದು, ಈ ಸಾಧನವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾಗಿದೆ.

``ಪೇಪರ್ ಮೈಕ್ರೋಸ್ಕೋಪ್ ಒಂದರ ಮೇಲೆ ಮೊಬೈಲ್ ಫೋನ್ ಕ್ಯಾಮರಾವನ್ನು ಈ ಸಾಧನಕ್ಕಾಗಿ ಅಳವಡಿಸಿದ್ದು ಇದು  ರಕ್ತದ ಮಾದರಿಯ ಚಿತ್ರವನ್ನು ಒಂದು ಸ್ಲೈಡ್ ಮೇಲೆ ಕೆಲವು ರಾಸಾಯನಿಕಗಳ ಸಹಾಯದಿಂದ ತೆಗೆಯುತ್ತದೆ. ಮಲೇರಿಯಾ ಕೋಶಗಳು ರಕ್ತದಲ್ಲಿದೆಯೇ ಅಥವಾ ಇಲ್ಲವೇ  ಎಂದು ತಿಳಿಯಲು  ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಸೆಂಟ್ರಲ್ ಸರ್ವರ್ ಮೂಲಕ ಪರಿಶೀಲಿಸಲಾಗುತ್ತದೆ,'' ಎಂದು ಶಿಬ್ಪುರ್ ಸಸ್ಥೆಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಖ್ಯಸ್ಥ ಡಾ ಅರಿಂದಮ್ ಬಿಸ್ವಾಸ್ ಹೇಳಿದ್ದಾರೆ.

ಈ ಸಾಧನಕ್ಕಾಗಿ ಉಪಯೋಗಿಸಲಾಗುವ ಪೇಪರ್ ಮೈಕ್ರೋಸ್ಕೋಪ್ ಅಥವಾ ಸೂಕ್ಷ್ಮದರ್ಶಕವನ್ನು ಫೋಲ್ಡ್‍ಸ್ಕೋಪ್ ಅಥವಾ ಆಪ್ಟಿಕಲ್ ಮೈಕ್ರೋಸ್ಕೋಪ್ ಎಂದೂ ಕರೆಯಲಾಗುತ್ತದೆ.

ಪ್ರತಿಯೊಂದು ಪರೀಕ್ಷೆಗೆ  ರೋಗಿಯೊಬ್ಬ ಕೇವಲ  10ರೂ ವ್ಯಯಿಸಬೇಕಾಗುತ್ತದೆ.  ಅದಕ್ಕಾಗಿ ಆತನ ಅಥವಾ ಆಕೆಯ ಬೆರಳ ತುದಿಯಿಂದ ಕೇವಲ ಒಂದು ಹನಿ ರಕ್ತ ತೆಗೆಯಲಾಗುತ್ತದೆ.

ಈ ಹೊಸ ವ್ಯವಸ್ಥೆಯನ್ನು  ಸೆಂಟಾರ್ ಎಂದು ಹೇಳಲಾಗುತ್ತಿದ್ದು  ಈ ಮಡಚಬಹುದಾದ ಪೇಪರ್ ನಿರ್ಮಿತ ಮೈಕ್ರೋಸ್ಕೋಪ್  ತಯಾರಿಸುವ ವೆಚ್ಚ ಕೇವಲ ರೂ 80 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News