‘ಪದ್ಮಾವತಿ’ ರಂಗೋಲಿ ಹಾಳುಗೆಡವಿದ ಸಂಘಪರಿವಾರದ ಕಾರ್ಯಕರ್ತರ ಬಂಧನ
ಸೂರತ್, ಅ. 20: ನಗರದ ಮಾಲ್ ಒಂದರಲ್ಲಿ ಪದ್ಮಾವತಿ ಚಲನಚಿತ್ರದಿಂದ ಪ್ರೇರಣೆ ಹೊಂದಿ ರಚಿಸಲಾದ ರಂಗೋಲಿಯನ್ನು ಹಾಳುಗೆಡವಿದ ಐದು ಮಂದಿಯನ್ನು ಸೂರತ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಐವರಲ್ಲಿ ನಾಲ್ವರು ಕರ್ಣಿ ಸೇನೆಯ ಸದಸ್ಯರು, ಓರ್ವ ವಿಎಚ್‌ಪಿ ಸದಸ್ಯನಾಗಿದ್ದಾನೆ.
ಅಕ್ಟೋಬರ್ 15ರಂದು ಉಮ್ರಾ ಪ್ರದೇಶದ ರಾಹುಲ್ ರಾಜ್ ಮಾಲ್‌ನಲ್ಲಿ ಕಲಾವಿದ ಕರಣ್ ಕೆ. ರಚಿಸಿದ ರಂಗೋಲಿ ಹಾಳುಗೆಡವಿದ ಆರೋಪದಲ್ಲಿ ಅಕ್ಟೋಬರ್ 16ರಂದು ನಗರ ಪೊಲೀಸರು ಐವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ.
ರಂಗೋಲಿ ಹಾಳುಗೆಡವಿದ ಬಳಿಕ ‘ಜೈಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗುತ್ತಾ ತೆರಳಿರುವ ವೀಡಿಯೊ ದೃಶ್ಯಗಳ ಆಧಾರದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂತಹ ಘಟನೆಗಳು ನಡೆದರೆ ದೂರು ನೀಡಲು ಮುಂದೆ ಬನ್ನಿ ಎಂದು ಮಾಲ್ ಮಾಲಕರನ್ನು ಆಗ್ರಹಿಸಿರುವ ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ, ನಾವು ಐದು ಮಂದಿಯನ್ನು ಬಂಧಿಸಿದ್ದೇವೆ. ವೀಡಿಯೊ ಫೂಟೇಜ್ ಆಧರಿಸಿ ಇನ್ನಷ್ಟು ಜನರನ್ನು ಬಂಧಿಸಲಾಗುವುದು. 8ರಿಂದ 10 ಜನರು ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.