×
Ad

ತ್ರಿಪುರಾ: ಜಾನುವಾರು ಕಳ್ಳಸಾಗಣೆದಾರರಿಂದ ದಾಳಿಗೊಳಗಾಗಿದ್ದ ಬಿಎಸ್‌ಎಫ್ ಅಧಿಕಾರಿಯ ಸಾವು

Update: 2017-10-20 20:51 IST

ಅಗರ್ತಲಾ,ಅ.20: ರವಿವಾರ ರಾತ್ರಿ ತ್ರಿಪುರಾದಲ್ಲಿ ಜಾನುವಾರು ಕಳ್ಳಸಾಗಣೆದಾರರ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಿಎಸ್‌ಎಫ್ ಅಧಿಕಾರಿ ದೀಪಕ ಕುಮಾರ ಮಂಡಲ್(45) ಅವರು ಶುಕ್ರವಾರ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಬಿಎಸ್‌ಎಫ್‌ನ 145ನೇ ಬಟಾಲಿಯನ್‌ನ ಅಫಿಷಿಯೇಟಿಂಗ್ ಕಮಾಂಡಂಟ್ ಆಗಿದ್ದ ಮಂಡಲ್ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ಶನಿವಾರ ಅವರ ಹುಟ್ಟೂರಾದ ನಾಡಿಯಾ ಜಿಲ್ಲೆಯ ಹಂಸಖಲಿಯಲ್ಲಿ ನಡೆಯಲಿದೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ರವಿವಾರ ರಾತ್ರಿ ಪಶ್ಚಿಮ ತ್ರಿಪುರಾದ ಸಿಪಾಹಿಜಲಾ ಜಲ್ಲೆಯ ಸೋನಾಮುರಾ ಉಪವಿಭಾಗದ ಬಲೇರದೆಫಾ ಎಂಬಲ್ಲಿ ಬಾಗ್ಲಾದೇಶದ ಗಡಿಯಲ್ಲಿ ಜಾನುವಾರುಗಳ ಕಳ್ಳಸಾಗಣೆಯನ್ನು ತಡೆಯಲು ಮಂಡಲ್ ನೇತೃತ್ವದ ಬಿಎಸ್‌ಎಫ್ ತಂಡವು ಕರ್ತವ್ಯ ನಿರ್ವಹಿಸುತ್ತಿತ್ತು. ಈ ಸಂದರ್ಭ ಅತಿವೇಗವಾಗಿ ಬಂದ ಜಾನುವಾರು ಕಳ್ಳಸಾಗಣೆಯ ವಾಹನವು ಮಂಡಲ್‌ಗೆ ಡಿಕ್ಕಿ ಹೊಡೆದಿತ್ತು. ಪ್ರಪಾತಕ್ಕೆಸೆಯಲ್ಪಟ್ಟಿದ್ದ ಅವರು ತೀವ್ರವಾಗಿ ಗಾಯಗೊಂಡಿದ್ದರು.

ತ್ರಿಪುರಾ ಪೊಲೀಸರು ಸೋಮವಾರ ವಾಹನವನ್ನು ವಶಪಡಿಕೊಂಡು ಚಾಲಕನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News