ಬೆಳ್ಳಿತೆರೆಯಲ್ಲಿ ಕೇಜ್ರಿವಾಲ್ ಬದುಕು

Update: 2017-10-20 18:12 GMT

ಬಾಲಿವುಡ್‌ನಲ್ಲಿ ಈಗ ಬಯೋಪಿಕ್‌ಗಳ ಸುವರ್ಣ ಯುಗ. ಇದೀಗ ದಿಲ್ಲಿಯ ಆಮ್ ಆದ್ಮಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಬದುಕು ಕೂಡಾ ಬಾಲಿವುಡ್ ಚಿತ್ರವಾಗಿ ಮೂಡಿಬರುತ್ತಿದೆ. ಇನ್‌ಸಿಗ್ನಿಫಿಕ್ಯಾಂಟ್ ಮ್ಯಾನ್ ಎಂದು ಹೆಸರಿಡಲಾದ ಈ ಚಿತ್ರವನ್ನು ಖುಶ್ಬೂ ರಾಂಕಾ ಹಾಗೂ ವಿನಯ್ ಶುಕ್ಲಾ ನಿರ್ದೇಶಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತನಾಗಿ ಭ್ರಷ್ಟಾಚಾರ ವಿರೋಧಿ ಹೋರಾಟ ನಡೆಸಿದ ಕೇಜ್ರಿವಾಲ್, ಆನಂತರ ಧುತ್ತೆಂದು ದಿಲ್ಲಿಯ ಮುಖ್ಯಮಂತ್ರಿ ಪಟ್ಟವನ್ನೇರಿದ ಹಿನ್ನೆಲೆಯ ಕಥೆಯುಳ್ಳ ಈ ಚಿತ್ರ ಕೂಡಾ ವಿವಾದದಿಂದ ಹೊರತಾಗಿಲ್ಲ. ಹಿಂದಿನ ಸೆನ್ಸಾರ್ ಮಂಡಳಿ ಅಧ್ಯಕ್ಷ ಫೆಹಲಾಝ್ ನಿಹಲಾನಿ ಅವರು ಇನ್‌ಸಿಗ್ನಿಫಿಕ್ಯಾಂಟ್ ಮ್ಯಾನ್ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಹಿಂದೇಟು ಹಾಕಿದ್ದರು. ಚಿತ್ರವನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತಿತರ ರಾಜಕಾರಣಿಗಳ ಅನುಮತಿ ಪಡೆಯುವಂತೆಯೂ ಶರತ್ತು ಒಡ್ಡಿದ್ದರು. ಕೊನೆಗೂ ನಿರ್ಮಾಪಕರು ಸೆನ್ಸಾರ್ ಸರ್ಟಿಫಿಕೇಟ್ ಮೇಲ್ಮನವಿ ನ್ಯಾಯಾಧಿಕರಣದ ಮೆಟ್ಟಲೇರಿದ್ದರು. ಸೆನ್ಸಾರ್ ಮಂಡಳಿ ಅಧ್ಯಕ್ಷರ ಶರತ್ತನ್ನು ಅಸಾಂವಿಧಾನಿಕವೆಂದು ಹೇಳಿದ ನ್ಯಾಯಾಧೀಕರಣವು, ಚಿತ್ರಕ್ಕೆ ಹಸಿರು ನಿಶಾನೆ ನೀಡಿತು.

ಈ ಮಧ್ಯೆ ಅಂತಾರಾಷ್ಟ್ರೀಯ ಚಲನಚಿತ್ರ ವಲಯಗಳಲ್ಲಿಯೂ ಇನ್‌ಸಿಗ್ನಿಫಿಕ್ಯಾಂಟ್ ಮ್ಯಾನ್‌ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ, ಈ ಚಿತ್ರದ ಪ್ರದರ್ಶನದ ಹಕ್ಕುಗಳನ್ನು ವಿಶ್ವದ ಬೃಹತ್ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲೊಂದಾದ ವೈಸ್ ಖರೀದಿಸಿದೆ. ಈವರೆಗೆ ವಿಶ್ವದಾದ್ಯಂತ 50ಕ್ಕೂ ಅಧಿಕ ಚಲನಚಿತ್ರೋತ್ಸವಗಳಲ್ಲಿ ಇನ್‌ಸಿಗ್ನಿಫಿಕ್ಯಾಂಟ್ ಮ್ಯಾನ್ ಪ್ರದರ್ಶನವಾಗಿದ್ದು, ಚಿತ್ರಪ್ರೇಮಿಗಳಿಂದ ವ್ಯಾಪಕ ಪ್ರಶಂಸೆ ಗಿಟ್ಟಿಸಿದೆ. ಆನಂದ್‌ಗಾಂಧಿ ನಿರ್ಮಾಣದ ಈ ಚಿತ್ರ ನವೆಂಬರ್ 17ರಂದು ಬಿಡುಗಡೆ ಭಾಗ್ಯ ಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News