ಸ್ಯಾಂಡಲ್‌ವುಡ್‌ನ ಮೋಜೋಗೆ ಜಾಗತಿಕ ಮನ್ನಣೆ

Update: 2017-10-20 18:15 GMT

ಸ್ಯಾಂಡಲ್‌ವುಡ್ ಹೆಮ್ಮೆಪಟ್ಟುಕೊಳ್ಳುವಂತಹ ಸುದ್ದಿಯಿದು. ಶ್ರೀಶ ಬೆಳಕವಾಡಿ ನಿರ್ದೇಶನದ ಕನ್ನಡ ಚಿತ್ರ ‘ಮೋಜೋ’ ಅಂತಾರಾಷ್ಟ್ರೀಯ ಚಲನಚಿತ್ರವಲಯದಲ್ಲೂ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಕಳೆದ ವಾರ ಕೋಲ್ಕತಾದಲ್ಲಿ ನಡೆದ ಅಂತಾರಾಷ್ಟೀಯ ಕಲ್ಟ್ ಚಲನಚಿತ್ರೋತ್ಸವದಲ್ಲಿ ಮೋಜೋ, ಪ್ರಾಯೋಗಿಕ ಚಿತ್ರಗಳ ವಿಭಾಗದಲ್ಲಿ ಅಸಾಧಾರಣಾ ಸಾಧನೆಯ ಪ್ರಶಸ್ತಿಯನ್ನುಗಳಿಸಿದೆ. ವಿಶ್ವದಾದ್ಯಂತ ಈ ಚಲನಚಿತ್ರೋತ್ಸವಕ್ಕೆ ಆಗಮಿಸಿದ 1 ಸಾವಿರ ಚಿತ್ರಗಳ ಪೈಕಿ, ಅಂತಿಮವಾಗಿ 30 ಚಿತ್ರಗಳು ಸ್ಪರ್ಧೆಗೆ ಆಯ್ಕೆಯಾಗಿದ್ದವು. ಆದರೆ ಮೋಜೋ ಇವೆಲ್ಲವನ್ನೂ ಹಿಂದಿಕ್ಕಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಗಜಾನನ್ ಭಟ್, ಪೂರ್ವಿ ಆರ್ಟ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿರುವ ಮೋಜೋ 110 ನಿಮಿಷಗಳ ಕಾಲಾವಧಿಯನ್ನು ಹೊಂದಿದೆ. ಎಲ್ಲವೂ ಸರಿಹೋದಲ್ಲಿ ಮೋಜೋ ಅಕ್ಟೋಬರ್ 27ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಬಿಡುಗಡೆಗೆ ಮೊದಲೇ ಮೋಜೋದ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿದ್ದು, ಈಗಾಗಲೇ ಅದು ವಿವಿಧ ಚಲನ ಚಿತ್ರೋತ್ಸವಗಳಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅಮೆರಿಕದ ಗ್ಲೆನ್‌ಡೇಲ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನಕ್ಕೆ ಆಯ್ಕೆಯಾದ ಏಕೈಕ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಯೂ ಮೋಜೋ ಪಾಲಾಗಿದೆ.

ಅಮೆರಿಕದ ಗೋಲ್ಡನ್‌ಗೇಟ್ ಚಲನಚಿತ್ರೋತ್ಸವ, ಲಾಸ್ ಏಂಜಲೀಸ್ ಚಲನಚಿತ್ರೋತ್ಸವದಲ್ಲೂ ಮೋಜೋ ಅಧಿಕೃತ ಪ್ರದರ್ಶನವನ್ನು ಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಫೆಸ್ಟಿವಲ್ ಆಫ್ ಗ್ಲೋಬ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದು ಸೈ ಎನಿಸಿಕೊಂಡಿದೆ.

ಚಿತ್ರದ ನಾಯಕ ಕೊಲೆಯ ರಹಸ್ಯವನ್ನು ತಾನು ಹೊಂದಿರುವ ವಿಶೇಷವಾದ ಸುಪ್ತಪ್ರಜ್ಞೆಯ ಸಹಾಯದಿಂದ ಭೇದಿಸುವುದೇ ಈ ಚಿತ್ರದ ಕಥಾವಸ್ತುವಂತೆ. ಕ್ಷಣಕ್ಷಣಕ್ಕೂ ಕುತೂಹಲವನ್ನು ಕೆರಳಿಸುವ ಮೋಜೋ ಕನ್ನಡ ಚಿತ್ರರಂಗಕ್ಕೆ ಹೊಸ ಮೈಲುಗಲ್ಲಾಗಲಿದೆಯೆಂದು ನಿರ್ದೇಶಕ ಬೆಳಕವಾಡಿ ಭರವಸೆ ವ್ಯಕ್ತಪಡಿಸುತ್ತಾರೆ.

ಅಂದಹಾಗೆ ಮನಶ್ಶಾಸ್ತ್ರದ ಬಗ್ಗೆ ಬೆಳಕವಾಡಿಗೆ ಅಪಾರ ಆಸಕ್ತಿಯಂತೆ. ಎರಡು ವರ್ಷಗಳ ಹಿಂದೆ ಓದಿದ ಪುಸ್ತಕವೊಂದನ್ನು ಮತ್ತೆ ಓದಿದಾಗ ತನಗೆ ಈ ಚಿತ್ರದ ಬಗ್ಗೆ ಕಲ್ಪನೆ ಹೊಳೆದಿದ್ದಾಗಿ ಬೆಳಕವಾಡಿ ಹೇಳುತ್ತಾರೆ. 20 ವರ್ಷಗಳಿಂದ ಐಟಿ ಟೆಕ್ಕಿಯಾಗಿ ಕೆಲಸ ಮಾಡಿದ್ದ ಬೆಳಕವಾಡಿ,ಮೋಜೋ ಬಳಿಕ ಪೂರ್ಣಾವಧಿಗೆ ಚಿತ್ರರಂಗಕ್ಕಿಳಿ ಯಲ್ಲಿದ್ದಾರೆ. 2015ರಲ್ಲೇ ಮೋಜೋ ಸ್ಕ್ರಿಪ್ಟ್ ರೆಡಿ ಮಾಡಿದ್ದ ಅವರು ಚಿತ್ರದಲ್ಲಿ ಹಲವಾರು ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಿದ್ದಾರೆ.

ಹಲವಾರು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದ ಮನು ಈ ಚಿತ್ರದ ನಾಯಕ. ವೃತ್ತಿಯಲ್ಲಿ ಹಾರ್ಡ್‌ವೇರ್ ಎಂಜಿನಿಯರ್ ಆಗಿರುವ ಅನುಷಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಎಸ್.ಡಿ. ಅರವಿಂದ್, ಮೋಜೋಗೆ ಸಂಗೀತ ನೀಡಿದ್ದಾರೆ. ಅಂತಾರಾಷ್ಟ್ರೀಯ ಪ್ರೇಕ್ಷಕರನ್ನೂ ಮೋಡಿ ಮಾಡಿರುವ ಮೋಜೋ ಕನ್ನಡದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲಿದೆಯೇ ಎಂಬುದನ್ನು ಕಾದು ನೋಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News