ಪಡಿತರ ಪಡೆಯಲು ಆಧಾರ್ ಕಡ್ಡಾಯವಲ್ಲ; ಜಾರ್ಖಂಡ್ ಸರಕಾರದ ಘೋಷಣೆ

Update: 2017-10-21 12:50 GMT

ಜಮ್‌ಷೆಡ್‌ಪುರ, ಅ.21: ಜಾರ್ಖಂಡ್‌ನಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪಡಿತರ ವಸ್ತುಗಳನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಜಾರ್ಖಂಡ್ ಸರಕಾರ ತಿಳಿಸಿದೆ.

ರಾಜ್ಯದಲ್ಲಿ ಸೆ.28ರಂದು 11 ವರ್ಷದ ಬಾಲಕಿಯೋರ್ವಳು ಹಸಿವಿನಿಂದ ಕಂಗೆಟ್ಟು ಮೃತಪಟ್ಟಿದ್ದು ಈ ಘಟನೆಗೆ ರೇಷನ್ ಕಾರ್ಡ್‌ಗೆ ಆಧಾರ್ ಜೋಡಿಸದಿರುವುದು ಕಾರಣ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಘೋಷಣೆ ಹೊರಡಿಸಿದೆ.

  ರೇಷನ್ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಲ್ಲ. ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತುಪತ್ರ ಅಥವಾ ಇನ್ನಿತರ ಯಾವುದೇ ನಿರ್ದಿಷ್ಟ ಕಾರ್ಡನ್ನು ತೋರಿಸಿ ಪಡಿತರ ಪಡೆಯಬಹುದು ಎಂದು ಜಾರ್ಖಂಡ್‌ನ ಆಹಾರ ಇಲಾಖೆಯ ಸಚಿವ ಸರಯು ರಾಯ್ ತಿಳಿಸಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ಧಾನ್ಯ ಬ್ಯಾಂಕ್‌ಗಳನ್ನು ತೆರೆಯಲಾಗುತ್ತದೆ . ಪಡಿತರ ವಿತರಣೆಯ ಕುರಿತು ಯಾವುದೇ ದೂರುಗಳಿದ್ದರೆ ಟೋಲ್‌ಫ್ರೀ ಕರೆಸಂಖ್ಯೆ-1800 212 55 12-ಗೆ ಕರೆ ಮಾಡಬಹುದು ಎಂದು ಸಚಿವರು ತಿಳಿಸಿದರು.

ಈ ಮಧ್ಯೆ, ಅಕ್ಟೋಬರ್ 17ರಂದು ಮುಖ್ಯಮಂತ್ರಿ ರಘುವರ್ ದಾಸ್ ನೇಮಿಸಿದ್ದ ತನಿಖಾ ಸಮಿತಿ, ಬಾಲಕಿಯ ಸಾವಿಗೆ ಮಲೇರಿಯಾ ಜ್ವರ ಕಾರಣ ಎಂದು ವರದಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ, ಮೂವರು ಸದಸ್ಯರ ತನಿಖಾ ಸಮಿತಿಯು ಅಕ್ಟೋಬರ್ 6ರಂದು ನೀಡಿದ್ದ ವರದಿಯಲ್ಲೂ ಬಾಲಕಿಯ ಸಾವಿಗೆ ಮಲೇರಿಯಾ ಜ್ವರ ಕಾರಣ ಎಂದು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News