ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೊಬೈಲ್ ನಲ್ಲಿ ಬೆಂಕಿ
ಭೋಪಾಲ್, ಅ.21: ದಿಲ್ಲಿ-ಇಂದೋರ್ ಮಧ್ಯೆ ಸಂಚರಿಸುತ್ತಿದ್ದ ಜೆಟ್ ಏರ್‌ವೇಸ್ ವಿಮಾನದ ಪ್ರಯಾಣಿಕನ ಮೊಬೈಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿದೆ. ಆಗಸದಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ವಿಮಾನದಲ್ಲಿದ್ದ 120 ಪ್ರಯಾಣಿಕರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ದಿಲ್ಲಿಯ ನಿವಾಸಿ ಅರ್ಪಿತಾ ಧಾಲ್ ಎಂಬಾಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು ತನ್ನ ಮೊಬೈಲ್ ಫೋನನ್ನು ಬ್ಯಾಗಿನೊಳಗೆ ಇರಿಸಿ ಅದನ್ನು ಸೀಟಿನಡಿ ಇಟ್ಟಿದ್ದರು. ಕೆಲ ಸಮಯದ ಬಳಿಕ ಬ್ಯಾಗಿನಿಂದ ಹೊಗೆ ಬರುತ್ತಿದ್ದುದನ್ನು ಗಮನಿಸಿ ಕೂಡಲೇ ವಿಮಾನದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಆಗಸದ ಮಧ್ಯೆ ನಡೆದ ಈ ಘಟನೆಯಿಂದ ವಿಮಾನದಲ್ಲಿದ್ದವರೆಲ್ಲರೂ ಆತಂಕಗೊಂಡರು. ಅಲ್ಲದೆ ವಿಮಾನದಲ್ಲಿದ್ದ ಅಗ್ನಿಶಾಮಕ ವ್ಯವಸ್ಥೆ ಕಾರ್ಯಾಚರಿಸುತ್ತಿರಲಿಲ್ಲ ಎಂದು ಅರ್ಪಿತಾ ಜೊತೆ ಪ್ರಯಾಣಿಸುತ್ತಿದ್ದ ಅವರ ಪತಿ ಅತುಲ್ ಧಾಲ್ ತಿಳಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ವಿಮಾನದ ಸಿಬ್ಬಂದಿಗಳು ಹೊಗೆ ಬರುತ್ತಿದ್ದ ಪೋನನ್ನು ನೀರು ತುಂಬಿದ ಟ್ರೇ ಒಂದರಲ್ಲಿ ಮುಳುಗಿಸಿಟ್ಟರು. ಬ್ಯಾಗಿನಲ್ಲಿ ಮೂರು ಫೋನ್‌ಗಳಿದ್ದು ಸ್ಯಾಮ್‌ಸಂಗ್ ಜೆ7 ಫೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ .
ವಿಮಾನದಲ್ಲಿದ್ದ ಅಗ್ನಿಸುರಕ್ಷಾ ವ್ಯವಸ್ಥೆ ಕಾರ್ಯಾಚರಿಸದ ಬಗ್ಗೆ ಅಸಮಾಧಾನ ಸೂಚಿಸಿರುವ ಅತುಲ್, ಈ ಬಗ್ಗೆ ಜೆಟ್ ಏರ್‌ವೇಸ್ ಸಂಸ್ಥೆಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಭಾರೀ ಅಗ್ನಿದುರಂತ ನಡೆದಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.
ಬೆಂಕಿ ಆಕಸ್ಮಿಕವನ್ನು ದೃಢಪಡಿಸಿರುವ ಜೆಟ್‌ಏರ್‌ವೇಸ್‌ನ ವಕ್ತಾರರು, ಮಾರ್ಗದರ್ಶಿ ಸೂತ್ರದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಫೋನನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ತನಿಖೆಯ ಬಳಿಕ ಅದನ್ನು ಮರಳಿಸಲಾಗುವುದು ಎಂದು ತಿಳಿಸಿದ್ದಾರೆ.