ಒಡಿಶಾದ ಐದು ಜಿಲ್ಲೆಗಳಲ್ಲಿ ಮಾವೋವಾದಿಗಳಿಂದ ಬಂದ್
ಭುವನೇಶ್ವರ,ಅ.21: ಒಡಿಶಾದ ಐದು ಜಿಲ್ಲೆಗಳಲ್ಲಿ ಮಾವೋವಾದಿಗಳಿಂದ 12 ಗಂಟೆಗಳ ಬಂದ್ ಕರೆಯ ಪರಿಣಾಮ ಶನಿವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಇದೇ ವೇಳೆ ಬಂಡುಕೋರರು ಕಂಧಮಾಲ್ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯನ್ನು ಕೊಂದಿದ್ದಾರೆ ಹಾಗೂ ಓರ್ವ ಮಹಿಳೆಯನ್ನು ಅಪಹರಿಸಿದ್ದಾರೆ.
ಕೋರಾಪತ್ ಜಿಲ್ಲೆಯ ಕುಂಡುಲಿ ಗ್ರಾಮದಲ್ಲಿ ಅ.10ರಂದು ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಆರೋಪಿಗಳ ತಕ್ಷಣ ಬಂಧನ, ಬುಡಕಟ್ಟು ಮಹಿಳೆಯರ ವಿರುದ್ಧ ಹಿಂಸೆಗೆ ಅಂತ್ಯ ಮತ್ತು ಮಹಾನದಿ ಜಲ ವಿವಾದಕ್ಕೆ ಪರಿಹಾರ ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿಪಿಐ(ಮಾವೋವಾದಿ)ನ ಬನ್ಸ್‌ಧಾರಾ-ಘುಮುಸುರಾ-ನಾಗಬಲಿ ವಿಭಾಗವು ಈ ಬಂದ್‌ಗೆ ಕರೆ ನೀಡಿತ್ತು.
ಶಾಂತಿಯನ್ನು ಕಾಯ್ದುಕೊಳ್ಳಲು ಸೂಕ್ಷ್ಮಸ್ಥಳಗಳಲ್ಲಿ ಅರೆ ಸೇನಾಪಡೆಗಳು ಮತ್ತು ಪೊಲೀಸರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಿತ್ತಲಾಗಿದ್ದರೂ ರಾಯಗಡ, ಕಂಧಮಾಲ್, ಗಜಪತಿ, ಕಾಳಹಂದಿ ಮತ್ತು ಗಂಜಾಂ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಈ ಐದು ಜಿಲ್ಲೆಗಳಲ್ಲಿ ಸರಕಾರಿ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ನಗರ ಪ್ರದೇಶಗಳಲ್ಲಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಶಾಲಾ-ಕಾಲೇಜುಗಳು ಮತ್ತು ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲಾಗಿತ್ತು ಎಂದರು.
ಬಂಡುಕೋರರು ಕಂಧಮಾಲ್ ಜಿಲ್ಲೆಯಲ್ಲಿ ಹಲವೆಡೆ ರಾಷ್ಟ್ರೀಯ ಹೆದ್ದಾರಿ 59ರಲ್ಲಿ ತಡೆಗಳನ್ನೊಡ್ಡಿದ್ದರು.
ಇದೇ ವೇಳೆ ಕಂಧಮಾಲ್-ಕಾಳಹಂದಿ ಗಡಿಯಲ್ಲಿ ಮಾವೋವಾದಿಗಳಿಂದ ಕೊಲೆಯಾಗಿದ್ದಾನೆ ಎನ್ನಲಾಗಿರುವ ವ್ಯಕ್ತಿಯೋರ್ವನ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸಶಸ್ತ್ರ ಬಂಡುಕೋರರ ಗುಂಪೊಂದು ನಸುಕಿನ ಒಂದು ಗಂಟೆಯ ಸುಮಾರಿಗೆ ಗ್ರಾಮಕ್ಕೆ ನುಗ್ಗಿ ಮೋಹನ ಮಝಿ ಎಂಬ ಈ ವ್ಯಕ್ತಿಯನ್ನು ಆತನ ಮನೆಯಿಂದ ಎಳದೊಯ್ದಿದ್ದರು ಮತ್ತು ಇಂದು ಬೆಳಿಗ್ಗೆ ಆತನನ್ನು ಕೊಂದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಕಂಧಮಾಲ್ ಜಿಲ್ಲೆಯ ಲಾಹಿದಿ ಗ್ರಾಮದ ಮಹಿಳೆಯೋರ್ವಳನ್ನು ಪೊಲೀಸ್ ಮಾಹಿತಿದಾರಳೆಂದು ಶಂಕಿಸಿ ನಕ್ಸಲರು ಅಪಹರಿಸಿದ್ದಾರೆ.