ಕಾಶ್ಮೀರದಲ್ಲಿ ಉಗ್ರವಾದವನ್ನು ಗಂಭೀರವಾಗಿ ಎದುರಿಸಲಾಗುತ್ತಿದೆ: ಜ.ಬಿಪಿನ್ ರಾವತ್
ಜಮ್ಮು,ಅ.21: ಕಾಶ್ಮೀರದಲ್ಲಿ ಉಗ್ರವಾದವನ್ನು ಅತ್ಯಂತ ಗಂಭೀರವಾಗಿ ಎದುರಿಸ ಲಾಗುತ್ತಿದೆ ಎಂದು ಶನಿವಾರ ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು, ಉಗ್ರವಾದ ಹೆಚ್ಚಲು ಸಾಮಾಜಿಕ ಮಾಧ್ಯಮಗಳು ಕಾರಣವಾಗಿವೆ ಎಂದು ದೂರಿದರು.
47 ಆರ್ಮರ್ಡ್ ರೆಜಿಮೆಂಟ್‌ಗೆ ರಾಷ್ಟ್ರಪತಿಗಳ ಧ್ವಜ ಪ್ರದಾನ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಜಡೆ ಕತ್ತರಿಸುವ ಘಟನೆಗಳನ್ನು ‘ಮಾಮೂಲು ವಿಷಯ’ವೆಂದು ತಳ್ಳಿಹಾಕಿದರಲ್ಲದೆ, ನಾಗರಿಕ ಆಡಳಿತ ಮತ್ತು ಪೊಲೀಸ್ ಇಲಾಖೆ ಅದನ್ನು ನೋಡಿಕೊಳ್ಳುತ್ತವೆ ಎಂದು ಹೇಳಿದರು.
ಉಗ್ರವಾದವು ಹೆಚ್ಚುತ್ತಿದ್ದು, ಇದು ಜಾಗತಿಕ ವಿದ್ಯಮಾನವಾಗಿದೆ. ನಾವಿದನ್ನು ತುಂಬ ಗಂಭೀರವಾಗಿ ಎದುರಿಸುತ್ತಿದ್ದೇವೆ ಎಂದ ಅವರು, ಉಗ್ರವಾದ ಕುರಿತು ಜಮ್ಮು-ಕಾಶ್ಮೀರ ಸರಕಾರ, ಪೊಲೀಸರು, ಆಡಳಿತ ಮತ್ತು ಪ್ರತಿಯೊಬ್ಬರೂ ಕಳವಳಗೊಂಡಿದ್ದಾರೆ ಎಂದರು.
ಇಂತಹ ಉಗ್ರವಾದದಿಂದ ಜನರು ದೂರವಿರುವಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ತೀವ್ರವಾದದತ್ತ ಜನರು, ವಿಶೇಷವಾಗಿ ರಾಜ್ಯದ ಯುವಜನರು ಆಕರ್ಷಿತರಾಗಲು ಸಾಮಾಜಕ ಮಾಧ್ಯಮಗಳು ಪ್ರಮುಖ ಕಾರಣವಾಗಿವೆ ಎಂದು ಅವರು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾವತ್, ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿರುವ ಜಡೆ ಕತ್ತರಿಸುವ ಪ್ರಕರಣಗಳು ಸರಕಾರ ಮತ್ತು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿಲ್ಲ. ಅದು ದೇಶದ ಇತರ ಭಾಗಗಳಲ್ಲಿ ನಡೆಯುತ್ತಿತ್ತು, ಅದೀಗ ಕಾಶ್ಮೀರದಲ್ಲಿಯೂ ನಡೆಯುತ್ತಿದೆ. ನಾಗರಿಕ ಆಡಳಿತ ಮತ್ತು ಪೊಲೀಸ್ ಇಲಾಖೆ ಅದನ್ನು ನೋಡಿಕೊಳ್ಳಲಿವೆ ಎಂದರು.
ಕಣಿವೆಯಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಜಡೆ ಕತ್ತರಿಸಿದ ಪ್ರಕರಣಗಳ ಲಾಭವನ್ನು ಪ್ರತ್ಯೇಕತಾವಾದಿಗಳು ಪಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ರಾವತ್,ಇದರ ಹಿಂದಿನ ಸತ್ಯವನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ ಎಂದು ಉತ್ತರಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ದಾಳಿಗಳು ಪ್ರತ್ಯೇಕತಾವಾದಿಗಳನ್ನು ಮಣಿಸುವ ಮತ್ತು ಕಲ್ಲು ತೂರಾಟಗಾರರಿಗೆ ಹಿನ್ನಡೆಯನ್ನುಂಟು ಮಾಡುವ ಉದ್ದೇಶ ಹೊಂದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರಕಾರದ ಸೂಚನೆಗಳನ್ನು ಪಾಲಿಸಲಾಗುತ್ತಿದೆ ಮತ್ತು ಎನ್‌ಐಎ ದಾಳಿಗಳು ಅದರ ಭಾಗವಾಗಿವೆ ಎಂದರು.