×
Ad

1,500 ಕೋಟಿ ರೂ. ಸಾಲದ ನಿರೀಕ್ಷೆಯಲ್ಲಿ ಏರ್‌ಇಂಡಿಯಾ

Update: 2017-10-21 19:56 IST

ಹೊಸದಿಲ್ಲಿ, ಅ.21: ತುರ್ತಾಗಿ ಬೇಕಿರುವ ‘ನಿರ್ವಹಣಾ ಬಂಡವಾಳ’ದ ಅವಶ್ಯಕತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 1,500 ಕೋಟಿ ರೂ. ಅಲ್ಪಾವಧಿ ಸಾಲ ಪಡೆಯಲು ಏರ್‌ಇಂಡಿಯಾ ಸಂಸ್ಥೆ ಮುಂದಾಗಿದೆ.

 ಆರ್ಥಿಕ ಕೊರತೆ ಹಾಗೂ ತೀವ್ರ ಸ್ಪರ್ಧೆಯ ಕಾರಣ ಸಾಲದ ಸುಳಿಯಲ್ಲಿ ಮುಳುಗಿರುವ ಏರ್‌ಇಂಡಿಯಾ ಸಂಸ್ಥೆ, ಸುಮಾರು ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಅಲ್ಪಾವಧಿ ಸಾಲ ಪಡೆಯಲು ಟೆಂಡರ್ ಆಹ್ವಾನಿಸಿದೆ. ಅಕ್ಟೋಬರ್ 18ರಂದು ನೀಡಿರುವ ಪ್ರಕಟಣೆಯಲ್ಲಿ ಸಂಸ್ಥೆಯು ‘ ತುರ್ತು ನಿರ್ವಹಣಾ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು ಸರಕಾರದ ಖಾತರಿ ಇರುವ 1,500 ಕೋಟಿ ರೂ. ಮೊತ್ತದ ಅಲ್ಪಾವಧಿ ಸಾಲದ ಅಗತ್ಯವಿದೆ’ ಎಂದು ತಿಳಿಸಿದೆ. ನಷ್ಟದಲ್ಲಿರುವ ಏರ್‌ಇಂಡಿಯಾ ಸಂಸ್ಥೆಯ ಬಂಡವಾಳ ಹಿಂತೆಗೆತ ಪ್ರಕ್ರಿಯೆಗೆ ಕೇಂದ್ರ ಸರಕಾರ ಈಗಾಗಲೇ ಒಪ್ಪಿಗೆ ನೀಡಿದೆ.

 ಈ ಸಾಲದ ಅವಧಿ 2018ರ ಜೂನ್ 27ರವರೆಗೆ ಅಥವಾ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಮುಗಿಯುವವರೆಗೆ ಜಾರಿಯಲ್ಲಿರುತ್ತದೆ. ಬ್ಯಾಂಕ್‌ಗಳು ತಮ್ಮ ಬಿಡ್ ಸಲ್ಲಿಸಬಹುದಾಗಿದ್ದು , ಸ್ವೀಕೃತಿ ಪತ್ರ ದೊರೆತ ಮೂರು ದಿನದೊಳಗೆ ಸಾಲದ ಮೊತ್ತ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್‌ನಲ್ಲೂ ಏರ್‌ಇಂಡಿಯಾ ಸಂಸ್ಥೆ 3,250 ಕೋಟಿ ರೂ. ಅಲ್ಪಾವಧಿ ಸಾಲ ಪಡೆಯಲು ಟೆಂಡರ್ ಆಹ್ವಾನಿಸಿತ್ತು. ಈ ಆಹ್ವಾನಕ್ಕೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಒಪ್ಪಿಗೆ ನೀಡಲಾದ ಯೋಜನೆಯಂತೆ, ಕೆಲವು ಕಾರ್ಯನಿರ್ವಹಣೆ ವೆಚ್ಚ ಸರಿದೂಗಿಸಲು ಏರ್‌ಇಂಡಿಯಾಕ್ಕೆ ಕೇಂದ್ರ ಸರಕಾರ 30,231 ಕೋಟಿ ರೂ. ಆರ್ಥಿಕ ನೆರವಿನ ಪ್ಯಾಕೇಜ್ ನೀಡುತ್ತದೆ. ಹತ್ತು ವರ್ಷಾವಧಿಯ ‘ಆರ್ಥಿಕ ನೆರವಿನ ಪ್ಯಾಕೇಜ್’ 2012ರಿಂದ ಆರಂಭಗೊಂಡಿದ್ದು ಇದುವರೆಗೆ ಸುಮಾರು 26,000 ಕೋಟಿ ರೂ. ಮೊತ್ತದ ನೆರವನ್ನು ನೀಡಲಾಗಿದೆ.

 ಸುಮಾರು 50,000 ಕೋಟಿ ರೂ.ಗೂ ಹೆಚ್ಚಿನ ಸಾಲದ ಹೊರೆ ಇರುವ ಏರ್‌ಇಂಡಿಯಾ ಸಂಸ್ಥೆಯ ಬಂಡವಾಳ ಹಿಂತೆಗೆತ ಪ್ರಸ್ತಾವನೆಗೆ ಕಳೆದ ಜೂನ್‌ನಲ್ಲಿ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರ ಸಮಿತಿ ಅನುಮೋದನೆ ನೀಡಿತ್ತು.

  ಬಂಡವಾಳ ಹಿಂತೆಗೆತ ಪ್ರಕ್ರಿಯೆಯ ಸೂತ್ರಗಳನ್ನು ಸಚಿವ ಮಟ್ಟದ ತಂಡವೊಂದು ರೂಪಿಸುತ್ತಿದೆ. ಏರ್‌ಇಂಡಿಯಾ ಸಂಸ್ಥೆಯ ಅಗಾಧ ಮೊತ್ತದ ಸಾಲದ ನಿರ್ವಹಣೆ, ನಿಷ್ಕ್ರಿಯ ಸಂಸ್ಥೆಯೊಂದಕ್ಕೆ ಕೆಲವು ಆಸ್ತಿಗಳನ್ನು ವರ್ಗಾಯಿಸುವುದು, ಏರ್‌ಇಂಡಿಯಾ ಸಂಸ್ಥೆಯ ಮೂರು ಲಾಭ ಗಳಿಸುವ ಸಹಸಂಸ್ಥೆಗಳನ್ನು ಸಂಸ್ಥೆಯಿಂದ ಹೊರತಾಗಿಸುವುದು ಹಾಗೂ ಬಂಡವಾಳ ಹಿಂಪಡೆಯುವುದು ಮುಂತಾದ ಕ್ರಮಗಳ ಬಗ್ಗೆ ಸಚಿವ ಮಟ್ಟದ ತಂಡವು ಚರ್ಚೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News