×
Ad

ಗ್ರಾಮಕ್ಕೆ ‘ಕಳಂಕ’ ತಂದಿದ್ದಾರೆಂದು ಆರೋಪಿಸಿ ಬಾಲಕಿಯ ತಾಯಿಗೆ ಹಲ್ಲೆ

Update: 2017-10-21 19:59 IST

ಹೊಸದಿಲ್ಲಿ, ಅ.21: ಆಧಾರ್ ನಂಬರ್ ಲಿಂಕ್ ಮಾಡದೆ ಇದ್ದುದರಿಂದ ಪಡಿತರ ಆಹಾರ ಸಿಗದೆ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾದ ಘಟನೆ ಬೆಳಕಿಗೆ ಬಂದ ನಂತರ ಈ ಬಾಲಕಿಯ ತಾಯಿಗೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಾಲಕಿ ಮೃತಪಟ್ಟ ವಿಚಾರ ಸುದ್ದಿಯಾದದ್ದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಆರೋಪಿಸಿ ಗ್ರಾಮಸ್ಥರು ಹಲ್ಲೆ ನಡೆಸಿರುವುದಾಗಿ ಸಂಘಟನೆಯೊಂದರ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

ಗ್ರಾಮಸ್ಥರಿಂದ ಹಲ್ಲೆಗೊಳಗಾದ ಮಹಿಳೆ ಕೊಯಿಲಿ ದೇವಿ ತನ್ನ ಗ್ರಾಮದಿಂದ 8 ಕಿ.ಮೀ. ದೂರದಲ್ಲಿರುವ ಕಾರ್ಯಕರ್ತೆ ತಾರಾಮಣಿ ಸಾಹು ಎಂಬವರ ಮನೆಯಲ್ಲಿ ಆಶ್ರಯ ಪಡೆಯಲು ಬಂದಿದ್ದಾರೆ ಎನ್ನಲಾಗಿದೆ.

“ಗ್ರಾಮಕ್ಕೆ ಕೆಟ್ಟ ಹೆಸರು ತಂದಿದ್ದಾಗಿ ಆರೋಪಿಸಿ ಕೊಯಿಲಿ ದೇವಿಯವರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ ನಂತರ ಅವರು ಮನೆಗೆ ಆಗಮಿಸಿರುವುದನ್ನು ನನ್ನ ಕುಟುಂಬಸ್ಥರು ತಿಳಿಸಿದರು. ಆಗ ನಾನು ರಾಂಚಿಯಲ್ಲಿದ್ದೆ” ಎಂದು ಸಾಹು ಹೇಳಿದ್ದಾರೆ.

ಆಧಾರ್ ಲಿಂಕ್ ಮಾಡದೆ ಇದ್ದುದರಿಂದ ಪಡಿತರ ಆಹಾರ ಸಿಗದೆ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಹಸಿವೆಯಿಂದ ಚಡಪಡಿಸಿ ಮೃತಪಟ್ಟಿರುವುದಾಗಿ ಆರೋಪಿಲಾಗಿತ್ತು. ಆಧಾರ್ ಲಿಂಕ್ ಮಾಡದೆ ಇದ್ದುದರಿಂದ ಬಾಲಕಿಯ ಕುಟುಂಬಕ್ಕೆ ಫೆಬ್ರವರಿ ತಿಂಗಳಿನಿಂದ ಪಡಿತರ ನೀಡುವುದನ್ನು ತಡೆಯಲಾಗಿತ್ತು ಎನ್ನಲಾಗಿದೆ. ಈ ಘಟನೆಯ ಬಗ್ಗೆ  ದೇಶಾದ್ಯಂತ ಭಾರೀ ಚರ್ಚೆಗಳು ನಡೆದಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಡಳಿತ ಬಾಲಕಿ ಮಲೇರಿಯಾದಿಂದ ಮೃತಪಟ್ಟಿದ್ದಾಳೆಯೇ  ಹೊರತು ಹಸಿವೆಯಿಂದಲ್ಲ ಎಂದಿತ್ತು.

ಕೊಯಿಲಿ ದೇವಿಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಸಿಮ್ಡೇಗಾ ಡೆಪ್ಯುಟಿ ಕಮಿಷನರ್ ಮಂಜುನಾಥ್ ಭಜಂತ್ರಿ ತಿಳಿಸಿದ್ದಾರೆ. “ಇಂತಹ ಘಟನೆ ನಡೆದೇ ಇಲ್ಲ ಎಂದು ಗ್ರಾಮಸ್ಥರು ಅರೋಪಿಸುತ್ತಿದ್ದಾರೆ. ನಾವು ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುತ್ತೇವೆ” ಎಂದವರು ಹೇಳಿದ್ದಾರೆ.

“ನನ್ನ ಮಗಳು ಮಲೇರಿಯಾದಿಂದ ಮೃತಪಟ್ಟಿಲ್ಲ. ಅವಳು ಕೊನೆಯುಸಿರೆಳೆಯುವಾಗಲೂ ಅನ್ನಕ್ಕಾಗಿ ಅಳುತ್ತಿದ್ದಳು. ಅವಳು ಮಲೇರಿಯಾದಿಂದ ಮೃತಪಟ್ಟಿದ್ದಾಳೆ ಎನ್ನುವ ವರದಿಗೆ ನಾನು ಹೆಬ್ಬೆಟ್ಟು ಹಾಕಿಲ್ಲ” ಎಂದು ಕೊಯಿಲಿ ದೇವಿ ಹೇಳಿದ್ದಾರೆ ಎಂದು ಕಾರ್ಯಕರ್ತೆ ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News