ಸತ್ಯ ಹರಿಶ್ಚಂದ್ರ: ನೋಡಿದ್ದು ಸುಳ್ಳಾಗಬಹುದು!

Update: 2017-10-21 18:45 GMT

  ತಾರಾಗಣ: ಶರಣ್, ಸಂಚಿತಾ ಪಡುಕೋಣೆ, ಭಾವನಾ ರಾವ್
ನಿರ್ದೇಶಕ: ದಯಾಳ್ ಪದ್ಮನಾಭನ್
ನಿರ್ಮಾಣ: ಕೆ ಮಂಜು
ಡಾ.ರಾಜ್‌ಕುಮಾರ್ ಅಭಿನಯದ ಸತ್ಯಹರಿಶ್ಚಂದ್ರ ಪೌರಾಣಿಕ ಚಿತ್ರಕ್ಕೂ , ಈ ಚಿತ್ರದ ಕತೆಗೂ ಸಂಬಂಧವಿಲ್ಲ. ಇದು ಸತ್ಯದೊಂದಿಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬನ ಕತೆ. ಅದೇ ಕಾರಣಕ್ಕೆ ಇದು ಸುಳ್ಳು ಕತೆಯಾಗಿಯೇ ಉಳಿದುಕೊಳ್ಳುತ್ತದೆ.
ಅಧ್ಯಕ್ಷ ಚಿತ್ರದ ಬಳಿಕ ಶರಣ್‌ಗೆ ಹಳ್ಳಿ ಹೀರೋನ ಇಮೇಜ್ ದೊರಕಿದೆ. ಅದನ್ನೇ ಇಲ್ಲಿಯೂ ಉಳಿಸಿಕೊಂಡಿದ್ದರೂ ಒಂದಷ್ಟು ವಿದೇಶಿ ದೃಶ್ಯಗಳಲ್ಲಿಯೂ ಶರಣ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಸುಳ್ಳು ಹೇಳುವ ನಾಯಕ ತನ್ನ ಪ್ರೇಯಸಿ ಎಂದು ಹೇಳಿದವಳನ್ನು ನಿಜವಾಗಿಯೂ ಪ್ರೇಯಸಿ ಮಾಡುವ ಉದ್ದೇಶದಿಂದ ವಿದೇಶಕ್ಕೆ ತೆರಳುತ್ತಾನೆ. ಅದಾಗಲೇ ಬೇರೊಬ್ಬನ ಜೊತೆಗೆ ಪ್ರೇಮದಲ್ಲಿರುವ ಆಕೆಯನ್ನು ತನ್ನೊಂದಿಗೆ ಹಳ್ಳಿಯ ಮನೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಆಕೆ ನಾಯಕನೊಂದಿಗೆ ಹಳ್ಳಿಗೆ ಬರಲು ಯಾಕೆ ಒಪ್ಪುತ್ತಾಳೆ? ಆಕೆಯ ಪ್ರಿಯಕರ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾನೆ? ಮತ್ತೋರ್ವ ನಾಯಕಿಯಾಗಿ ನಟಿಸಿರುವ ಭಾವನಾ ಪಾತ್ರವೇನು ಎನ್ನುವುದನ್ನು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ತೆರೆದಿಡಲಾಗಿದೆ. ಹಾಗಾಗಿ ಕ್ಲೈಮ್ಯಾಕ್ಸ್ ವರೆಗೆ ಕತೆ ನಿರೀಕ್ಷೆಯಂತೆಯೇ ಸಾಗುತ್ತದೆ.
    
ಹಿಂದಿಯ ’ಸಿಂಗ್ ಈಸ್ ಕಿಂಗ್’ ಚಿತ್ರದಿಂದ ಪ್ರೇರಣೆಗೊಂಡು ನಿರ್ಮಿಸಲಾದ ಪಂಜಾಬಿ ಸಿನೆಮಾ ’ಸಿಂಗ್ ವರ್ಸಸ್ ಕೌರ್ ’ನಿಂದ ಆಧಾರಿತಗೊಂಡ ಚಿತ್ರ ಇದು! ಹಾಗಾಗಿ ಕಥಾ ಸನ್ನಿವೇಶಗಳಲ್ಲಿ ಹೊಸತನದ ನಿರೀಕ್ಷೆ ಮಾಡುವಂತಿಲ್ಲ. ನಾಯಕನಾಗಿ ಶರಣ್ ಎಂದಿನ ಲವಲವಿಕೆಯ ಅಭಿನಯದೊಂದಿಗೆ ಹಾಡುಗಳಲ್ಲಿ ರಜನಿಕಾಂತ್ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡಿರುವುದು ವಿಶೇಷ. ಹೊಡೆದಾಟದ ಸನ್ನಿವೇಶಗಳಲ್ಲಿಯೂ ಅವರ ಎನರ್ಜಿ ಕಾಣಬಹುದಾಗಿದೆ. ನಾಯಕಿಯಾಗಿ ಸಂಚಿತಾ ಪಡುಕೋಣೆ ಹೆಸರಿನಲ್ಲಷ್ಟೇ ಅಲ್ಲ, ಲುಕ್ ನಲ್ಲಿಯೂ ಹಲವೆಡೆ ದೀಪಿಕಾ ಪಡುಕೋಣೆಯನ್ನು ಹೋಲುವುದು ವಿಶೇಷ. ಮತ್ತೋರ್ವ ನಾಯಕಿ ಭಾವನಾ ರಾವ್ ನಟನೆಯೊಂದಿಗೆ ಗ್ಲಾಮರ್ ನಲ್ಲಿಯೂ ತಾವು ಹಿಂದೆ ಬಿದ್ದಿಲ್ಲ ಎಂದು ತೋರಿಸಿದ್ದಾರೆ. ಶರಣ್ ತಾಯಿಯಾಗಿ ತಮಿಳು ನಟಿ ಸೀತಾರದ್ದು ಎಂದಿನ ಹಿತಮಿತ ಅಭಿನಯ.ಚಿಕ್ಕಣ್ಣನ ಹಾಸ್ಯವೂ ಹಿಂದಿನ ಶೈಲಿಗೆ ಸೀಮಿತ. ಆದರೆ ಸಾಧುಕೋಕಿಲ ನಿಜಕ್ಕೂ ಚಿತ್ರದಲ್ಲಿ ಒಂದಷ್ಟು ಗಂಭೀರವಾಗಿ ಕಾಣಿಸಿಕೊಂಡು ವಿಭಿನ್ನತೆ ತೋರಿಸಿದ್ದಾರೆ. ಆ ಪ್ರಯೋಗಕ್ಕೆ ನಿರ್ದೇಶಕರು ತೋರಿಸಿದ ಧೈರ್ಯವನ್ನು ಮೆಚ್ಚಬೇಕು. ಆದರೆ ಶರತ್ ಲೋಹಿತಾಶ್ವನಂಥ ಪ್ರತಿಭಾವಂತ ನಟರನ್ನು ಕಾಮಿಡಿ ಖಳನಾಗಿ ಸೀಮಿತಗೊಳಿಸಿರುವುದು ವಿಪರ್ಯಾಸ. ಚಿತ್ರದ ಪ್ರಮುಖ ವಿಶೇಷತೆಯಾಗಿರುವುದು ಸಂಚಾರಿ ವಿಜಯ್ ನಟಿಸಿರುವ ಅತಿಥಿ ಪಾತ್ರ ಎಂದು ಹೇಳಲೇ ಬೇಕು. ಇಂಥದೊಂದು ಪಾತ್ರವನ್ನು ವಿಜಯ್ ಮಾಡಬೇಕಿತ್ತಾ ಎಂಬಂತೆ ಮತ್ತೊಂದು ಚರ್ವಿತ ಚರ್ವಣ ಪಾತ್ರವಾಗಿ ಎಂಟ್ರಿಕೊಡುವ ವಿಜಯ್ ಕ್ಯಾರೆಕ್ಟರ್ ನ ಬದಲಾವಣೆ ಆಕರ್ಷಕ. ಚಿತ್ರದ ಆರಂಭದ ಒಂದಷ್ಟು ದೃಶ್ಯಗಳು ಕ್ಲೀಷೆಯಾಗಿ ತೋರುತ್ತದೆ. ಆದರೆ ವಿದೇಶದ ಸನ್ನಿವೇಶಗಳ ಆಗಮನದೊಂದಿಗೆ ಹೊಸತನ ಮೂಡುತ್ತದೆ.ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಪಾಸಿಟಿವ್ ಅಂಶ. ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಕೂಡ ಪ್ರಶಂಸಾರ್ಹರು. ಆದರೆ ’ಕುಲದಲ್ಲಿ ಮೇಲ್ಯಾವುದೋ..’ ಹಾಡನ್ನು ಚಿತ್ರದಲ್ಲಿ ಬಲವಂತವಾಗಿ ತುರುಕಿದಂತಿದೆ. ಒಟ್ಟಿನಲ್ಲಿ ಮನರಂಜನೆ ಉಂಟುಮಾಡುವ ಚಿತ್ರದ ಉದ್ದೇಶ ಬಹುತೇಕ ವಿಜಯಿಸಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News