ಜಾರ್ಖಂಡ್ ನಲ್ಲಿ ಹಸಿವಿಗೆ ಮತ್ತೊಂದು ಬಲಿ

Update: 2017-10-22 14:08 GMT

ಜಾರ್ಖಂಡ್, ಅ.22: ಕೆಲ ದಿನಗಳ ಹಿಂದಷ್ಟೇ ಬಾಲಕಿಯೊಬ್ಬಳು ಹಸಿವಿನಿಂದ ಮೃತಪಟ್ಟ ಘಟನೆಯ ನೆನಪು ಮಾಸುವ ಮುನ್ನವೇ ಜಾರ್ಖಂಡ್ ನ ಝಾರಿಯಾ ಜಿಲ್ಲೆಯ ಧನ್ಬಾದ್ ಎಂಬಲ್ಲಿ ವ್ಯಕ್ತಿಯೊಬ್ಬರು ಹಸಿವಿನಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಬೈದ್ ನಾಥ್ ದಾಸ್ ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದು, ಸರಕಾರದಿಂದ ಬಡವರಿಗಾಗಿ ಇರುವ ಯಾವ ಯೋಜನೆಯೂ ಇವರ ಕುಟುಂಬಕ್ಕೆ ಸಿಕ್ಕಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ರಿಕ್ಷಾ ಎಳೆಯುವ ವೃತ್ತಿ ಮಾಡುತ್ತಿದ್ದ ಬೈದ್ ನಾಥ್ ಪಡಿತರ ಚೀಟಿ ಪಡೆಯಲು 3 ವರ್ಷಗಳ ಕಾಲ ಸತತ ಪ್ರಯತ್ನ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗದ್ದರಿಂದ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ನಡುವೆ ಅವರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಕುಟುಂಬಕ್ಕೆ ಎರಡು ಹೊತ್ತಿನ ಊಟವೂ ಲಭಿಸುತ್ತಿರಲಿಲ್ಲ. ತಂದೆಯ ದುಡಿಮೆಯನ್ನೇ ನಾವು ಅವಲಂಬಿಸಿದ್ದೆವು ಎಂದು ಬೈದ್ ನಾಥ್ ರ ಪುತ್ರ ರವಿಕುಮಾರ್ ದಾಸ್ ಹೇಳಿದ್ದಾರೆ.

“ನನ್ನ ಮಾವನ ಹೆಸರು ಕೂಡ ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಯಲ್ಲಿತ್ತು. ಅವರು ನಾಲ್ಕ ವರ್ಷಗಳ ಹಿಂದೆಯೇ ಮೃತಪಟ್ಟರು. ಆನಂತರ ನಾವು ಪಡಿತರ ಚೀಟಿ ಪಡೆಯಲು ಸಾಕಷ್ಟು ಪ್ರಯತ್ನಿಸಿದ್ದೆವು. 20 ದಿನಗಳಿಂದ ನನ್ನ ತಂದೆಯೂ ಅನಾರೋಗ್ಯದಿಂದಿದ್ದರು. ಆದರೆ ಚಿಕಿತ್ಸೆ ನೀಡಲು ನಮ್ಮ ಬಳಿ ಹಣವಿರಲಿಲ್ಲ. ನಮಗೆ ಪಡಿತರ ಸಿಕ್ಕಿದ್ದರೆ ತಂದೆ ಬದುಕುತ್ತಿದ್ದರು. ಆದರೆ ನಮ್ಮ ಕುಟುಂಬದ ಆಧಾರಸ್ತಂಬವಾಗಿದ್ದವರನ್ನೇ ನಾವು ಕಳೆದುಕೊಂಡಿದ್ದೇವೆ” ಎಂದವರು ಹೇಳಿದರು.

ಆದರೆ ಕುಟುಂಬಸ್ಥರ ಈ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಬೈದ್ ನಾಥ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಯೇ ಹೊರತು, ಹಸಿವೆಯಿಂದಲ್ಲ ಮೃತರ ಪತ್ನಿ ಹಾಗು ಪುತ್ರ ಇಬ್ಬರೂ ದುಡಿಯುತ್ತಿದ್ದಾರೆ ಎಂದು ಪ್ರಕಟನೆಯೊಂದರಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News