ಒಂದು ಪಕ್ಷದ ಬಳಿ ಮಾತ್ರ ಮಿತಿಯಿಲ್ಲದಷ್ಟು ಹಣವಿದೆ: ಬಿಜೆಪಿಯನ್ನು ಕುಟುಕಿದ ಶಿವಸೇನೆ

Update: 2017-10-23 14:02 GMT

ಮುಂಬೈ,ಅ.23: ಬಿಜೆಪಿಯನ್ನು ಹೆಸರಿಸದೆ ಅದರ ವಿರುದ್ಧ ಟೀಕಾಪ್ರಹಾರ ನಡೆಸಿರುವ ಶಿವಸೇನೆಯು, ಒಂದು ಪಕ್ಷವು ಮಾತ್ರ ಅಪರಿಮಿತ ಹಣವನ್ನು ಹೊಂದಿದೆ ಮತ್ತು ಜನತೆಯಿಂದ ತಿರಸ್ಕರಿಸಲ್ಪಟ್ಟಿದ್ದರೂ ಗೋವಾ ಮತ್ತು ಮಣಿಪುರಗಳಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದೆ. ಶಿವಸೇನೆಯನ್ನು ಉರುಳಿಸುವ ಪ್ರಯತ್ನಕ್ಕಾಗಿ ಇದೇ ಹಣವನ್ನು ಬಳಸಲಾಗಿತ್ತು ಎಂದೂ ಅದು ಕಿಡಿಕಾರಿದೆ.

ನೋಟು ಅಮಾನ್ಯದ ಬಳಿಕ ಜನರು ಆರ್ಥಿಕ ಹಿಂಜರಿತವನ್ನು ಅನುಭವಿಸಿದ್ದರೂ ಒಂದು ಪಕ್ಷವು ಮಾತ್ರ ಉಚ್ಛ್ರಾಯಕ್ಕೇರಿದೆ ಮತ್ತು ಜನರಿಂದ ತಿರಸ್ಕರಿಸಲ್ಪಟ್ಟರೂ ಗೋವಾ ಹಾಗೂ ಮಣಿಪುರಗಳಲ್ಲಿ ಅಧಿಕಾರಕ್ಕೇರಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮನಾ’ದ ಸೋಮವಾರ ಸಂಚಿಕೆಯ ಸಂಪಾದಕೀಯವು ಹೇಳಿದೆ.

 ಶಿವಸೇನೆಯು ತನ್ನ ಬೆಂಬಲವನ್ನು ಹಿಂದೆಗೆದುಕೊಂಡರೂ ಮಹಾರಾಷ್ಟ್ರದಲ್ಲಿನ ಸರಕಾರವು ಸ್ಥಿರವಾಗುಳಿಯಲಿದೆ ಎಂದು ಆ ಪಕ್ಷವು ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಮತ್ತೊಮ್ಮೆ ಬಿಜೆಪಿಯನ್ನು ಹೆಸರಿಸದೆ ಪ್ರಸ್ತಾಪಿಸಿರುವ ಸಂಪಾದಕೀಯವು, ಮಿತಿಯಿಲ್ಲದ ಹಣದ ಬಲದಲ್ಲಿ ಈ ಬಡಾಯಿ ಕೊಚ್ಚಲಾಗುತ್ತಿದೆ. ಅವರ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಗಾಗಿ ಯಾರೂ ಕೋರುತ್ತಿಲ್ಲ ಎನ್ನುವುದು ಅಚ್ಚರಿದಾಯಕವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News