ರಾಷ್ಟ್ರಗೀತೆ ಪ್ರಸಾರ ಕಡ್ಡಾಯ: ಪರಿಶೀಲನೆಗೆ ಸುಪ್ರೀಂ ಸೂಚನೆ

Update: 2017-10-23 14:33 GMT

ಹೊಸದಿಲ್ಲಿ, ಅ.23: ದೇಶದಾದ್ಯಂತ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆಯ ಪ್ರಸಾರವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರಧ್ವಜ ಸಂಹಿತೆಯನ್ನು ತಿದ್ದುಪಡಿಗೊಳಿಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

    ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿರುವ ತನ್ನ ಈ ಹಿಂದಿನ ಆದೇಶ ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಕೇಂದ್ರ ಸರಕಾರ ಗಮನಿಸಬೇಕಿದೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿತು. ಎಲ್ಲಾ ಸಿನೆಮಮಂದಿರಗಳಲ್ಲೂ ಸಿನೆಮ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಬೇಕು ಎಂದು ಕೋರಿ ಶ್ಯಾಮ್‌ನಾರಾಯಣ್ ಚೌಕ್ಸೆ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ.

ಭಾರತವು ವಿವಿಧ ಜಾತಿ, ಸಂಸ್ಕೃತಿಯ ದೇಶವಾಗಿದ್ದು ಏಕರೂಪತೆ ಸಾಧಿಸುವ ನಿಟ್ಟಿನಲ್ಲಿ ಸಿನೆಮ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವ ಅಗತ್ಯವಿದೆ ಎಂದು ವಿಚಾರಣೆ ಸಂದರ್ಭ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ತಿಳಿಸಿದರು.

 ಸಿನೆಮ ಮಂದಿರಗಳಲ್ಲಿ ಸಿನೆಮ ಪ್ರದರ್ಶನ ಆರಂಭದ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿ 2016ರ ಡಿಸೆಂಬರ್ 1ರಂದು ತಾನು ನೀಡಿದ್ದ ಆದೇಶವನ್ನು ಮಾರ್ಪಡಿಸಬಹುದು. ಆದೇಶದಲ್ಲಿರುವ ಪ್ರಸಾರ ಮಾಡತಕ್ಕದ್ದು ಎಂಬ ಪದದ ಬದಲು ಪ್ರಸಾರ ಮಾಡಬಹುದು ಎಂದು ಬದಲಾಯಿಸಬಹುದು ಎಂದು ನ್ಯಾಯಪೀಠ ತಿಳಿಸಿತು.

  ಅಲ್ಲದೆ ರಾಷ್ಟ್ರಗೀತೆಯ ಪ್ರತಿಷ್ಠೆಗೆ ಘಾಸಿಯಾಗುವ ರೀತಿಯಲ್ಲಿ ರಾಷ್ಟ್ರಗೀತೆಯನ್ನು ಪ್ರಿಂಟ್ ಮಾಡಿಸಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸುವ ಹಾಗೂ ಈ ಕುರಿತು ಶಿಷ್ಟಾಚಾರವೊಂದನ್ನು ರೂಪಿಸುವಂತೆ ನ್ಯಾಯಪೀಠ ಸರಕಾರಕ್ಕೆ ಸೂಚಿಸಿತು.

 ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಬದ್ಧತೆಯನ್ನು ನಾಗರಿಕರಲ್ಲಿ ಮೂಡಿಸುವ ನಿಟ್ಟಿನಲ್ಲಿ ದೇಶದಾದ್ಯಂತದ ಸಿನೆಮ ಮಂದಿರಗಳಲ್ಲಿ ಸಿನೆಮ ಪ್ರದರ್ಶನದ ಮೊದಲು ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಕಳೆದ ವರ್ಷ ಆದೇಶ ಜಾರಿಗೊಳಿಸಿದೆ. ಓರ್ವ ವ್ಯಕ್ತಿ ತನ್ನ ರಾಷ್ಟ್ರಗೀತೆ ಹಾಗೂ ರಾಷ್ಟ್ರಗೀತೆಗೆ ತೋರುವ ಗೌರವ ಆತನಿಗೆ ಮಾತೃಭೂಮಿಯ ಮೇಲೆ ಇರುವ ಗೌರವದ ಪ್ರತೀಕವಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News