ನಗರಪಾಲಿಕೆ ಚುನಾವಣೆ: ಆದಿತ್ಯನಾಥ್‌ಗೆ ಕಠಿಣ ಸವಾಲು

Update: 2017-10-23 16:33 GMT

ಲಕ್ನೊ, ಅ.23: ಈ ವರ್ಷಾರಂಭದಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಿಂದುತ್ವ ಅಲೆಯ ಲಾಭ ಪಡೆದು ಅಧಿಕಾರ ಗಿಟ್ಟಿಸಿಕೊಂಡ ಬಿಜೆಪಿ ಗೆ ಹಾಗೂ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮುಂಬರುವ ನಗರಪಾಲಿಕೆ ಚುನಾವಣೆ ಭಾರೀ ಕಠಿಣ ಸವಾಲಾಗಿದೆ ಎನ್ನಲಾಗಿದೆ.

  ಧಾರ್ಮಿಕ ಮುಖಂಡನಾಗಿದ್ದು ರಾಜಕಾರಣಿಯಾಗಿ ಪರಿವರ್ತಿತರಾದ ಆದಿತ್ಯನಾಥ್ ಅವರ ಕಾರ್ಯವೈಖರಿಯನ್ನು ರಾಜ್ಯದ ಜನತೆ ಯಾವ ರೀತಿ ಸ್ವೀಕರಿಸಿದ್ದಾರೆ ಎಂಬುದನ್ನು ಈ ಚುನಾವಣೆಯ ಫಲಿತಾಂಶ ಒರೆಗೆ ಹಚ್ಚಲಿದೆ .ಅಲ್ಲದೆ 2019ರ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದ ಮತದಾರರಿಗೆ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಲು ಇದೊಂದು ಅವಕಾಶವಾಗಿದ್ದು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಇದಿರಾಗಿರುವ ಭಾರೀ ಸವಾಲು ಆಗಿದೆ ಎಂದು ವಿಶ್ಲೇಷಿಸಲಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಸ್ಥಳೀಯ ವಿಷಯಗಳನ್ನು ಆಧರಿಸಿ ನಡೆಯುತ್ತದೆ. ನಗರಪಾಲಿಕೆ ಚುನಾವಣೆಗಳಲ್ಲಿ ಜನಸಾಮಾನ್ಯರಿಗೆ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳನ್ನು ತಿರಸ್ಕರಿಸುವ ಅವಕಾಶ ಒದಗಿ ಬಂದಿದೆ ಎಂದು ಸಮಾಜವಾದಿ ಪಕ್ಷದ ವಿಧಾನಪರಿಷತ್ ಶಾಸಕ ರಾಜ್‌ಪಾಲ್ ಕಶ್ಯಪ್ ಹೇಳಿದ್ದಾರೆ.

    ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆದಿತ್ಯನಾಥ್ ಸರಕಾರದ ಕಾರ್ಯವೈಖರಿಗೆ ಜನ ನೀಡುವ ಮನ್ನಣೆ ಎಂದು ಭಾವಿಸಲಾಗುತ್ತದೆ ಎಂದು ಬಿಜೆಪಿ ತಿಳಿಸಿದೆ. ಗೆಲ್ಲುವ ಅವಕಾಶ ಇರುವ ಸ್ಥಳಗಳಲ್ಲಿ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ. ಈ ವರ್ಷದ ಜೂನ್-ಜುಲೈ ತಿಂಗಳಿನಲ್ಲಿ ನಡೆಯಬೇಕಿದ್ದ ಪಾಲಿಕೆ ಚುನಾವಣೆಯನ್ನು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಂಪೂರ್ಣಗೊಳ್ಳದ ಕಾರಣ ಮುಂದೂಡಲಾಗಿದ್ದು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News