ರಾಜಸ್ತಾನ ಸರಕಾರದ ಹೊಸ ಕಾನೂನಿಗೆ ಬಿಜೆಪಿ ಹಿರಿಯ ಶಾಸಕ ತಿವಾರಿ ವಿರೋಧ

Update: 2017-10-23 16:37 GMT

ಜೈಪುರ, ಅ.23: ನ್ಯಾಯಾಧೀಶರು ಹಾಗೂ ಸರಕಾರಿ ಉದ್ಯೋಗಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೊದಲು ಸರಕಾರದ ಅನುಮತಿ ಕಡ್ಡಾಯ ಎಂಬ ರಾಜಸ್ತಾನ ಸರಕಾರದ ಸುಗ್ರೀವಾಜ್ಞೆಯನ್ನು ವಿರೋಧಿಸಿರುವ ಬಿಜೆಪಿ ಹಿರಿಯ ಶಾಸಕ ಘನಶ್ಯಾಮ್ ತಿವಾರಿ, ವಿಧಾನಸಭೆಯಲ್ಲಿ ಸುಗ್ರೀವಾಜ್ಞೆ ವಿರೋಧಿಸಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ಘಟನೆ ನಡೆದಿದೆ.

ಇದೊಂದು ಕಪ್ಪು ಕಾನೂನಾಗಿದ್ದು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿವಾರಿ ಸುದ್ದಿಗಾರರಿಗೆ ತಿಳಿಸಿದರು. ಈ ಮಧ್ಯೆ, ಸರಕಾರದ ಸುಗ್ರೀವಾಜ್ಞೆಯನ್ನು ವಿರೋಧಿಸಿ ವಿರೋಧಪಕ್ಷದ ಮುಖಂಡ ರಾಮೇಶ್ವರ್ ದುದಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಶಾಸಕರ ಭವನದಿಂದ ವಿಧಾನಸಭೆ ಕಟ್ಟಡದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

 ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್ ಸದಸ್ಯರು ವಿಧಾನಸಭೆ ಆವರಣದೊಳಗೆ ಪ್ರತಿಭಟನೆ ನಡೆಸಿ, ಬಿಜೆಪಿ ಸರಕಾರ ಭ್ರಷ್ಟರಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದರು.

  ಈ ಸಂದರ್ಭ ಮಾತನಾಡಿದ ರಾಮೇಶ್ವರ್ ದುದಿ, ಸರಕಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ ಮತ್ತು ಪ್ರಜಾಪ್ರಭುತ್ವದ ತತ್ವಕ್ಕೆ ವಿರುದ್ಧವಾಗಿ ಸರಕಾರ ವರ್ತಿಸುತ್ತಿದೆ. ಅಲ್ಲದೆ ಮಾಧ್ಯಮದ ಕತ್ತು ಹಿಸುಕಲು ಪ್ರಯತ್ನಿಸುತ್ತಿದೆ ಎಂದು ದೂರಿದರು. ಪ್ರತಿಭಟನೆಗೆ ಬೆಂಬಲ ಸೂಚಿಸಿದ ಎನ್‌ಸಿಪಿ ಶಾಸಕ ಕೆ.ಎಲ್. ಮೀನ , ಸರಕಾರದ ನಡೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಮಸೂದೆಗೆ ನನ್ನ ವಿರೋಧವಿದೆ ಎಂದರು.

ರಾಜಸ್ತಾನದ ಗೃಹ ಸಚಿವ ಗುಲಾಬ್‌ಚಂದ್ ಕತಾರಿಯಾ ಸೋಮವಾರ ಕ್ರಿಮಿನಲ್ ಕಾನೂನು(ರಾಜಸ್ತಾನ ತಿದ್ದುಪಡಿ) ಮಸೂದೆ 2017ನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಈ ಕಾಯ್ದೆಯ ಪ್ರಕಾರ, ಸರಕಾರಿ ಉದ್ಯೋಗಿಗಳು, ಹಾಲಿ ಮತ್ತು ಮಾಜಿ ನ್ಯಾಯಾಧೀಶರ ವಿರುದ್ಧ ಸಲ್ಲಿಕೆಯಾಗುವ ಆರೋಪದ ಕುರಿತು ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು ಸರಕಾರದ ಅನುಮತಿ ಪಡೆಯಬೇಕಿದೆ. ಅಲ್ಲದೆ ಈ ಆರೋಪದ ಬಗ್ಗೆ ತನಿಖೆಗೆ ಸರಕಾರ ಒಪ್ಪಿಗೆ ನೀಡುವವರೆಗೆ ಇದರ ಬಗ್ಗೆ ಮಾಧ್ಯಮಗಳು ವರದಿ ಮಾಡುವಂತಿಲ್ಲ .

ಸುಗ್ರೀವಾಜ್ಞೆ ಹಿಂಪಡೆಯಲು ಸಂಪಾದಕರ ಸಂಘ ಆಗ್ರಹ

ರಾಜಸ್ತಾನ ಸರಕಾರದ ಆಧ್ಯಾದೇಶ ಮಾಧ್ಯಮಗಳನ್ನು ಪೀಡಿಸುವ ಉದ್ದೇಶದಿಂದ ಜಾರಿಗೊಳಿಸಲಾದ ವಿನಾಶಕರ ಸುಗ್ರೀವಾಜ್ಞೆ ಎಂದು ಹೇಳಿರುವ ಸಂಪಾದಕರ ಸಂಘ , ಸರಕಾರ ಅಪಾಯಕಾರಿ ಸುಗ್ರೀವಾಜ್ಞೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

  ಈ ಆಧ್ಯಾದೇಶದ ಮೂಲಕ ನ್ಯಾಯಾಂಗ ಹಾಗೂ ಸರಕಾರಿ ಉದ್ಯೋಗಿಗಳ ವಿರುದ್ಧ ಸಲ್ಲಿಕೆಯಾಗುವ ಸುಳ್ಳು ಎಫ್‌ಐಆರ್‌ಗಳನ್ನು ನಿವಾರಿಸಬಹುದು ಎಂದು ಮೇಲ್ನೋಟಕ್ಕೆ ಹೇಳಲಾಗಿದೆ. ಆದರೆ ವಾಸ್ತವವಾಗಿ ಇದು ಸರಕಾರಿ ಉದ್ಯೋಗಿಗಳ ಅಕ್ರಮ ಚಟುವಟಿಕೆಗೆ ರಕ್ಷಣೆ ನೀಡಿ, ಪತ್ರಿಕಾ ಮಾಧ್ಯಮದ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಸಂಘದ ಹೇಳಿಕೆಯಲ್ಲಿ ತಿಳಿಸಲಾಗಿದೆ.

   ಸಂಪಾದಕರ ಸಂಘವು ಈ ಹಿಂದಿನಿಂದಲೂ ಸಂತುಲಿತ, ಸತ್ಯ ಹಾಗೂ ಜವಾಬ್ದಾರಿಯುತ ವರದಿಗಳ ಪರವಾಗಿದೆ. ಆದರೆ ಸುಗ್ರೀವಾಜ್ಞೆಯು ಸಾರ್ವಜನಿಕ ಹಿತಾಸಕ್ತಿಯ ವರದಿ ಪ್ರಕಟಿಸುವ ಪತ್ರಕರ್ತರಿಗೆ ಜೈಲುಶಿಕ್ಷೆ ವಿಧಿಸುವ ಸ್ವಚ್ಛಂದ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ. ಆದ್ದರಿಂದ ಪತ್ರಿಕಾ ಸ್ವಾತಂತ್ರಕ್ಕೆ ಧಕ್ಕೆ ತರುವ ಯಾವುದೇ ಕ್ರಮ ಕೈಗೊಳ್ಳದೆ, ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕು ಎಂದು ಸಂಪಾದಕರ ಸಂಘ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News