ಡಬ್ಬಾವಾಲಾರಿಗೆ ಪುಸ್ತಕಾಲಯ!

Update: 2017-10-23 18:45 GMT

ಮುಂಬೈಯ ವಿಶ್ವವಿಖ್ಯಾತಿಯ ಡಬ್ಬಾವಾಲಾ ಮತ್ತು ರೈಲ್ವೆ ಸ್ಟೇಷನ್‌ನಕೂಲಿಗಳಿಗಾಗಿ ಪುಸ್ತಕಗಳನ್ನು ಓದಲು ಅವಕಾಶ ಮಾಡುವ ದೃಶ್ಯವೊಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ ದಿನದಿಂದ ಬೋರಿವಲಿ ರೈಲ್ವೆ ಸ್ಟೇಷನ್‌ನಲ್ಲಿ ಆರಂಭವಾಗಿದೆ. ಅರ್ಥಾತ್ ಪ್ರಯಾಣಿಕರಿಂದ ಸದಾ ತುಂಬಿ ತುಳುಕುವ ಈ ರೈಲ್ವೆ ಸ್ಟೇಷನ್‌ನ ಒಳಗಡೆ ಪುಸ್ತಕ ಓದುವುದಕ್ಕಾಗಿ ಸರಕಾರದ ವತಿಯಿಂದ ಒಂದು ವೇದಿಕೆ ಕಲ್ಪಿಸಲಾಗಿದೆ. ಇದನ್ನು ಶಿಕ್ಷಣ ಮಂತ್ರಿ ವಿನೋದ್ ತಾವ್ಡೆ ಉದ್ಘಾಟಿಸಿದ್ದಾರೆ. ಪುಸ್ತಕಾಲಯ ಅಭಿಯಾನಕ್ಕೆ ಮುಂಬೈಯ ಅನೇಕ ಪ್ರಸಿದ್ಧ ಪ್ರಕಾಶಕರು ಕೂಡಾ ಸಹಾಯ ಮಾಡಲು ಮುಂದಾಗಿದ್ದಾರೆ. ಇವರಲ್ಲಿ ಡಿಂಪಲ್ ಪ್ರಕಾಶನ, ವ್ಯಾಸ ಕ್ರಿಯೇಶನ್, ಶ್ಯಾಮ್ ಜೋಶಿ ಮೊದಲಾದ ಪ್ರಕಾಶಕರಿದ್ದಾರೆ. ಇವರೆಲ್ಲ ಕೂಲಿಗಳು ಮತ್ತು ಡಬ್ಬಾವಾಲಾರಿಗೆ ತಮ್ಮ ಪ್ರಕಾಶನದ ಪುಸ್ತಕಗಳನ್ನು ಉಚಿತವಾಗಿ ಓದಲು ನೀಡಲಿದ್ದಾರೆ. ರೈಲ್ವೆ ಕೂಲಿಗಳ ಸಂಘಟನೆಯ ಅಧ್ಯಕ್ಷ ಭಾವೂರಾವ್ ಚವ್ಹಾಣ್, ಡಬ್ಬಾವಾಲಾ ಸಂಘಟನೆಯ ವಕ್ತಾರ ಸುಭಾಷ್ ತಲೇಕರ್ ಉಪಸ್ಥಿತರಿದ್ದರು.

‘‘ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಸಿಗುವುದಲ್ಲದೆ, ವ್ಯಕ್ತಿಯ ವ್ಯಕ್ತಿತ್ವವೂ ವಿಕಸನವಾಗುವುದು’’ ಎಂದ ಶಿಕ್ಷಣ ಮಂತ್ರಿಯವರು ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಾರುತಿ ಚಿತಮ್‌ಪಲ್ಲಿ ಅವರ ಕೃತಿಯ ಕೆಲವು ಸಾಲುಗಳನ್ನು ಓದಿದರು.
* * *

12 ಭಾಗಗಳಲ್ಲಿ ಧಾರಾವಿಯ ಪುನರ್ವಿಕಾಸದ ಯೋಜನೆ
ರಾಜ್ಯ ಸರಕಾರವು ಏಷ್ಯಾದ ಅತಿದೊಡ್ದ ಜೋಪಡಿ ಬಾಹುಳ್ಯದ ಧಾರಾವಿಯ ಪುನರ್ವಸತಿ ಯೋಜನೆಗೆ ಇನ್ನೊಂದು ಹೊಸ ಪ್ರಯತ್ನ ಕೈಗೊಂಡಿದೆ. ಪ್ರತೀ ಸಲವೂ ಬಿಲ್ಡರ್‌ಗಳು ಟೆಂಡರ್ ಪ್ರಕ್ರಿಯೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬ ಬಗ್ಗೆ ಚಿಂತೆಗೀಡಾದ ರಾಜ್ಯ ಸರಕಾರವು ಇದೀಗ 12 ಭಾಗಗಳಲ್ಲಿ ಧಾರಾವಿಯ ಟೆಂಡರ್ ಪ್ರಕ್ರಿಯೆ ಮತ್ತೆ ಆರಂಭಿಸಿದೆ. ಈ ಮೊದಲಿನ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಗೊಳಿಸಿದೆ.

ಏಷ್ಯಾದ ಅತಿದೊಡ್ಡ ಸ್ಲಮ್ ಕ್ಷೇತ್ರ ಧಾರಾವಿಯ ಪುನರ್ವಿಕಾಸ ಯೋಜನೆಯಲ್ಲಿ ಸ್ಥಳೀಯ ನಿವಾಸಿಗಳಿಗೆ 350 ವರ್ಗ ಅಡಿಯ ಮನೆ ನೀಡಲು ನಿರ್ಧರಿಸಲಾಗಿತ್ತು. ಮುಖ್ಯಮಂತ್ರಿ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ಬೈಠಕ್ ನಡೆದಿದೆ. ಈ ಯೋಜನೆಗೆ 22 ಸಾವಿರ ಕೋಟಿ ರೂಪಾಯಿಯನ್ನು ಇರಿಸಲಾಗಿತ್ತು. ಹಾಗೂ ಈ ನಿಟ್ಟಿನಲ್ಲಿ 55 ಸಾವಿರ ಕುಟುಂಬಗಳಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ 7 ಸಾವಿರ ಪರಿವಾರ ಚಾಳ್‌ಗಳಲ್ಲಿ ವಾಸಿಸುತ್ತಾರೆ. 2004ರಿಂದ ನನೆಗುದಿಗೆ ಬಿದ್ದಿರುವ ಧಾರಾವಿ ಪುನರ್ವಸತಿ ಯೋಜನೆಗೆ 2016ರಲ್ಲಿ ರಾಜ್ಯದ ಬಿಜೆಪಿ ಸರಕಾರ ಈ ಬಗ್ಗೆ ಆಸಕ್ತಿ ತೋರಿಸಿತ್ತು. ಆದರೆ ಬಿಲ್ಡರ್‌ಗಳು ಹೆಚ್ಚಿನ ಎಫ್.ಎಸ್.ಐ. ಬೇಡಿಕೆ ಇರಿಸಿದ ಕಾರಣ ಟೆಂಡರ್ ಮಂಜೂರು ಆಗಿರಲಿಲ್ಲ.
ಧಾರಾವಿ ಏಷ್ಯಾದ ಬಹುದೊಡ್ಡ ಸ್ಲಮ್ ಕ್ಷೇತ್ರ. ಹೀಗಾಗಿ 4 ಭಾಗಗಳಲ್ಲಿ ವಿತರಿಸಿದ ಹೊರತೂ ಬಿಲ್ಡರ್‌ಗಳು ಈ ಯೋಜನೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಆದರೆ ಈಗ ರಿಯಲ್ ಎಸ್ಟೇಟ್ ಸೆಕ್ಟರ್‌ನಲ್ಲಿ ಜಾರಿಗೊಳಿಸಿದ ಹೊಸ ನಿಯಮದಿಂದ ಇದಕ್ಕೆ ಮುನ್ನಡೆ ಸಿಗಲಿದೆ. ಹಾಗೂ ಸರಕಾರದ ಶರ್ತಗಳೂ ಈಗ ಮೃದುವಾಗುತ್ತಿವೆ. ಇದೀಗ 12 ಭಾಗಗಳಲ್ಲಿ ಹಂಚಿರುವ ಕಾರಣ ಪುನರ್ವಿಕಾಸದ ಟೆಂಡರ್‌ನಲ್ಲಿ ಬಿಲ್ಡರ್‌ಗಳು ಆಸಕ್ತಿ ತೋರಿಸಬಹುದಾಗಿದೆ.
* * *

ಕೊಳಕು ಬಟ್ಟೆಗಳ ಕಾರಣ ಆಪರೇಷನ್ ಮಾಡುತ್ತಿಲ್ಲ!
ಮುಂಬೈ ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಬಳಸಲಾಗುವ ಬಟ್ಟೆಗಳು ಸಮಯಕ್ಕೆ ಸರಿಯಾಗಿ ಲಾಂಡ್ರಿಯಿಂದ ಒಗೆದು ಬರುವುದಿಲ್ಲ. ಈ ಕಾರಣ ಮನಪಾ ಆಸ್ಪತ್ರೆಗಳಲ್ಲಿ ಪ್ರತೀದಿನ ನೂರಾರು ಆಪರೇಷನ್‌ಗಳು ತಡೆಹಿಡಿಯಲ್ಪಡುತ್ತಿವೆ. ರೋಗಿಗಳಿಗೆ ಸರ್ಜರಿಯ ತಾರೀಕು ನೀಡಿದ ನಂತರವೂ ಆಸ್ಪತ್ರೆಯಲ್ಲಿ ಆಪರೇಷನ್‌ನ್ನು ನಡೆಸುತ್ತಿಲ್ಲ. ಹೀಗಾಗಿ ರೋಗಿಗಳಿಗೆ ಅನೇಕ ಬಾರಿ ಓಡಾಡಬೇಕಾಗುತ್ತದೆ. ಹಾಗಿದ್ದೂ ಮನಪಾ ಆಡಳಿತ ಈ ಸಮಸ್ಯೆ ಈಗ ಸುಧಾರಿಸಿದೆ ಅನ್ನುತ್ತಿದೆ.
ಒಂದು ಆಪರೇಶನ್ ಸಂದರ್ಭದಲ್ಲಿ ಸುಮಾರು 12 ರಿಂದ 15 ಬಟ್ಟೆಗಳ ಅಗತ್ಯವಿರುತ್ತದೆ. ಕೆ.ಇ.ಎಂ., ಸಯನ್, ನಾಯರ್ ಆಸ್ಪತ್ರೆಗಳಲ್ಲಿ ಪ್ರತೀದಿನ ಸುಮಾರು 10 ಸಾವಿರ ಬಟ್ಟೆಗಳನ್ನು ಒಗೆಯಲು ನೀಡಲಾಗುತ್ತದೆ. ಆದರೆ ಇವು ವಾಪಾಸು ತಡವಾಗಿ ಬರುತ್ತದೆ. ಈ ಸಂಗತಿಯನ್ನು ಹೊರಹಾಕಿದವರು ನಗರ ಸೇವಕ ಅಶ್ರಫ್ ಆಜ್ಮಿ. ಒಗೆಯಲು ಹೋದ ಬಟ್ಟೆಗಳು ಸಮಯಕ್ಕೆ ಸರಿಯಾಗಿ ವಾಪಾಸ್ ಬರುವುದೇ ಇಲ್ಲ. ಒಗೆಯಲು ಎರಡು ಪಟ್ಟು ಸಮಯ ತೆಗೆದುಕೊಳ್ಳುವುದರಿಂದ ರೋಗಿಗಳ ಅಪರೇಷನ್ ತಡವಾಗುತ್ತಿದೆ. ಲಾಂಡ್ರಿಗಳಲ್ಲಿ ಕೆಲಸಗಾರರು, ಮೆಶಿನ್‌ಗಳು ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ.
ಮುಂಬೈ ಮನಪಾದ ವಾರ್ಷಿಕ ಬಜೆಟ್ 25 ಸಾವಿರ ಕೋಟಿ ರೂಪಾಯಿ ಮಿಕ್ಕಿದೆ. ಇದರ ಬಳಿ ನಾಲ್ಕು ಪ್ರಮುಖ ಆಸ್ಪತ್ರೆಗಳಿವೆ. 18 ರಷ್ಟು ಇತರ ಆಸ್ಪತ್ರೆಗಳಿವೆ. ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಆಪರೇಷನ್‌ಗಳು ನಡೆಯುತ್ತಿವೆ. ಈಗಿನ ಸ್ಥಿತಿ ಎಂದರೆ ಆರು ಮೂಟೆ ಬಟ್ಟೆಗಳನ್ನು ಒಗೆಯಲು ಕಳುಹಿಸಿದರೆ ಸಮಯಕ್ಕೆ ಸರಿಯಾಗಿ ಬರುವುದು ಒಂದು ಮೂಟೆ ಬಟ್ಟೆ ಮಾತ್ರ.
 ಕೆ.ಇ.ಎಂ. ಆಸ್ಪತ್ರೆಯ ನಿರ್ದೇಶಕ ಪ್ರಮುಖ ಡಾ. ಅವಿನಾಶ್ ಸುಪ್ತೆ ‘‘ಕೆಲವು ತಿಂಗಳ ಹಿಂದೆ ಈ ಸಮಸ್ಯೆ ಇತ್ತು. ಈಗ ಕೆ.ಇ.ಎಂ. ನಲ್ಲಿ ನಾವು ನಮ್ಮದೇ ಆದ ಲಾಂಡ್ರಿ ಶುರುಮಾಡಿದ್ದೇವೆ’’ ಎಂದು ಹೇಳುತ್ತಾರೆ. ಆದರೆ, ಸಮಸ್ಯೆ ಈಗಲೂ ಬಗೆಹರಿದಿಲ್ಲ. ‘‘ಆಡಳಿತ ಈ ಬಗ್ಗೆ ಸರಿಯಾದ ಹೆಜ್ಜೆ ಇರಿಸಬೇಕು’’ ಎನ್ನುತ್ತಾರೆ ಕಾಂಗ್ರೆಸ್ ನಗರ ಸೇವಕ ಅಶ್ರಫ್ ಆಜ್ಮಿ.

* * *

ಹೆರಿಟೇಜ್ ಪರಿಸರದ ಬೀದಿ ದೀಪಗಳೂ ಹೆರಿಟೇಜ್

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಮುಂಬೈ ಮನಪಾ ಮುಖ್ಯಾಲಯ ಈ ಎರಡು ಐತಿಹಾಸಿಕ ವಾಸ್ತು ಪರಿಸರದ ಬೀದಿದೀಪಗಳಿಗೂ ಮತ್ತು ಸಿಗ್ನಲ್ ಕಂಬಗಳಿಗೂ ಹೆರಿಟೇಜ್ ಲುಕ್ ನೀಡಲಾಗುತ್ತಂತೆ. ಈ ಯೋಜನೆಯಂತೆ ಪರಿಸರದ 32 ಕಂಬಗಳ ಸಂಖ್ಯೆಗಳನ್ನು ಕಡಿಮೆ ಮಾಡಿ ಒಂಬತ್ತಕ್ಕೆ ಇಳಿಸಲಾಗುವುದು. ವಿಶೇಷ ಅಂದರೆ ಲೈಟ್‌ಗಳ ಕಂಬಗಳ ಸಂಖ್ಯೆ ಕಡಿಮೆ ಮಾಡಿದ ನಂತರವೂ ಈ ಪರಿಸರದ ಬೆಳಕಿನ ಪ್ರಭೆ 10 ಪ್ರತಿಶತ ವೃದ್ಧಿಸಲಿದೆ. ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಈ ವಿಶೇಷ ಯೋಜನೆ ಕೈಗೊಳ್ಳಲಾಗಿದೆ.
‘ಎ’ ವಾರ್ಡ್‌ನ ಸಹಾಯಕ ಮನಪಾ ಆಯುಕ್ತ ಕಿರಣ್ ದಿಘಾವ್ಕರ್ ‘‘ಈಗ ಇಲ್ಲಿ 22 ದಾರಿದೀಪಗಳು ಮತ್ತು 32 ಟ್ರಾಫಿಕ್ ಸಿಗ್ನಲ್‌ನ ಕಂಬಗಳಿವೆ. ಇವುಗಳ ಬದಲಿಗೆ ಹೆರಿಟೇಜ್ ಶ್ರೇಣಿಯ ಒಂಬತ್ತು ಕಂಬಗಳಲ್ಲಿ ಐದು ದಾರಿದೀಪಗಳು ಇರುವುದು. ಕಂಬಗಳ ಎತ್ತರ ಸುಮಾರು 40 ಫೀಟ್ ಇರುತ್ತದೆ. ದಾರಿದೀಪಗಳ ಐದು ಕಂಬಗಳಲ್ಲಿ ಸುಮಾರು 20 ಲೈಟ್ ಅಳವಡಿಸಲಾಗುವುದು. ಪ್ರತೀ ಕಂಬಗಳಲ್ಲಿ ನಾಲ್ಕು ಲೈಟ್‌ಗಳಿರುತ್ತದೆ. ಎಲ್ಲವೂ ಹೆರಿಟೇಜ್ ಕಂಬಗಳಾಗಿದ್ದು ಅವುಗಳು ತುಕ್ಕು ಹಿಡಿಯುವುದಿಲ್ಲ.’’ ಎಂದಿದ್ದಾರೆ.

* * *

ಮುಂಬೈಯಲ್ಲಿ ಪೊಲೀಸರಿಗೆ ಹೊಸ ಟೋಪಿ

ಮುಂಬೈಯಲ್ಲಿ 48 ಸಾವಿರ ಪೊಲೀಸರಿದ್ದಾರೆ. ಇವರಲ್ಲಿ 75 ಪ್ರತಿಶತ ಪೇದೆ ಮತ್ತು ಎ.ಎಸ್.ಐ. ಇದ್ದಾರೆ. ಪೊಲೀಸರು ಎಷ್ಟೇ ಉತ್ತಮ ಕೆಲಸವನ್ನು ಮಾಡಲಿ, ಜನರ ಮನದಲ್ಲಿ ಅವರ ಬಗ್ಗೆ ಉತ್ತಮ ಭಾವನೆ ಬರಲು ಕಷ್ಟವಿದೆ. ಇದೀಗ ಮುಂಬೈ ಪೊಲೀಸರ ಮೇಲಿನ ಭಾವನೆ ಬದಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದರ ಪ್ರಯತ್ನವಾಗಿ ಹೊಸ ರೀತಿಯ ಟೋಪಿಯನ್ನು ಪೊಲೀಸರು ಧರಿಸಲಿದ್ದಾರೆ. ಆದರೆ ಹಳೆಯ ಟೋಪಿಗಳೂ ಇರುವುದು. ಇದೀಗ ಬೇಸ್‌ಬಾಲ್ ಟೋಪಿಯಂತಹ ಟೋಪಿ ಬಳಸಲು ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಂದೋಬಸ್ತ್‌ನ ಸಮಯ ಬೈಕ್‌ನಲ್ಲಿ ತೆರಳುವ ಸಂದರ್ಭದಲ್ಲಿ ಪೊಲೀಸರು ತಮ್ಮ ಹಳೆಯ ಶೈಲಿಯ ಟೋಪಿಯನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬೇಕಾಗಿರುತ್ತದೆ. ಯಾಕೆಂದರೆ ಅದು ಗಾಳಿಗೆ ಹಾರುವ ಸಾಧ್ಯತೆಗಳಿವೆ. ಹೀಗಾಗಿ ಕೆಲವು ಸಮಯದ ಮೊದಲು ಪೊಲೀಸ್ ಶೋಧ ಮತ್ತು ವಿಕಾಸ ಬ್ಯೂರೋದ ಸಹಾಯದಿಂದ ಬೇಸ್‌ಬಾಲ್ ಟೋಪಿಯಂತಹ ಸುಮಾರು 50 ಟೋಪಿಗಳನ್ನು ತಯಾರಿಸಿ ಪೊಲೀಸರಿಗೆ ಪ್ರಾಯೋಗಿಕ ಸ್ತರದಲ್ಲಿ ನೀಡಲಾಗಿದೆ. ಮುಂಬೈ ಪೊಲೀಸ್ ಆಯುಕ್ತ ದತ್ತಾತ್ರೇಯ ಪಡ್‌ಸಲ್ಗೀಕರ್ ‘‘ಈ ಹೊಸ ಟೋಪಿ ಕೇವಲ ಸಿಪಾಯಿಯಿಂದ ಹಿಡಿದು ಸಹಾಯಕ ಉಪನಿರೀಕ್ಷಕ (ಎಎಸ್‌ಐ) ರ್ಯಾಂಕ್‌ನ ಪೊಲೀಸರಿಗೆ ಮಾತ್ರ ನೀಡಲಾಗುತ್ತದೆ. ಮೇಲಿನ ರ್ಯಾಂಕ್‌ನ ಪೊಲೀಸರು ಮೊದಲಿನ ಟೋಪಿಯನ್ನೇ ಧರಿಸಲಿದ್ದಾರೆ’’ ಎನ್ನುತ್ತಾರೆ.

* * *

ವಿದೇಶಿ ಕರೆಗಳ ವಂಚನೆ!

ವಿಭಿನ್ನ ಗಲ್ಫ್ ದೇಶಗಳಿಂದ ಬರುವ ಫೋನ್ ಕರೆಗಳನ್ನು ಲೋಕಲ್ ಕಾಲ್ ಎಂದು ದೂರಸಂಚಾರ ವಿಭಾಗಕ್ಕೆ ವಂಚನೆ ಮಾಡಿಕೊಂಡು ಬರುತ್ತಿದ್ದ ಭಿವಂಡಿಯ 25ರಷ್ಟು ನಕಲಿ ಟೆಲಿಫೋನ್ ಎಕ್ಸ್‌ಚೇಂಜ್‌ಗಳನ್ನು ಥಾಣೆ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಡಜನ್ನಿಗೂ ಹೆಚ್ಚಿನ ಜನರನ್ನು ತಮ್ಮ ವಶಕ್ಕೆ ಪಡೆದಿದ್ದಲ್ಲದೆ ಲಕ್ಷಗಟ್ಟಲೆ ರೂಪಾಯಿ ಮೌಲ್ಯದ ಉಪಕರಣಗಳನ್ನೂ ಜಪ್ತಿ ಮಾಡಿದ್ದಾರೆ. ಈ ವಿದೇಶ ಕರೆಗಳನ್ನು ಲೋಕಲ್ ಕರೆಗಳೆಂದು ತಪ್ಪಾಗಿ ಭಾವಿಸಿ ಜನ ಈ ಕರೆಗಳನ್ನು ಸೀಕರಿಸುತ್ತಿದ್ದರು. ನಕಲಿ ಟೆಲಿಫೋನ್ ಎಕ್ಸ್‌ಚೇಂಜ್‌ಗಳಲ್ಲಿ ಅನೇಕ ಖಾಸಗಿ ಟೆಲಿಫೋನ್ ಕಮ್ಯುನಿಕೇಶನ್ ಕಂಪೆನಿಗಳ ಸಿಮ್‌ಕಾರ್ಡ್ ನ್ನು ಬಳಸಲಾಗಿತ್ತು. ಈ ಸಿಮ್‌ಕಾರ್ಡ್‌ಗಳನ್ನು ನಕಲಿ ದಾಖಲೆ ಪತ್ರ, ನಕಲಿ ಹೆಸರು ಮತ್ತು ನಕಲಿ ವಿಳಾಸಗಳಿಂದ ಪಡೆಯಲಾಗಿತ್ತು. ಪೊಲೀಸ್ ಮೂಲಗಳು ತಿಳಿಸಿದಂತೆ ಕಳೆದ ಆಗಸ್ಟ್ ತಿಂಗಳಲ್ಲಿ ಥಾಣೆಯ ಅಂಬರ್‌ನಾಥ್ ನಿವಾಸಿ ಒಬ್ಬ ಬಿಲ್ಡರ್‌ಗೆ ಗೂಂಡಾನಿಂದ ಹಫ್ತಾಕ್ಕಾಗಿ ಬೆದರಿಕೆ ಬಂದಿತ್ತು. ಪೊಲೀಸರು ತನಿಖೆಗೈದಾಗ ಈ ಕರೆ ಒಡಿಶಾದಿಂದ ಬಂದಿತ್ತು. ಆನಂತರ ತನಿಖೆಗಾಗಿ ಥಾಣೆ ಪೊಲೀಸರು ಒಡಿಶಾಕ್ಕೆ ತೆರಳಿದರು. ನಂತರ ಒಡಿಶಾ ಎಸ್‌ಟಿಎಫ್ ಅಧಿಕಾರಿಗಳ ಜೊತೆಗೆ ತನಿಖೆಗೈದಾಗ 9 ನಕಲಿ ಟೆಲಿಫೋನ್ ಎಕ್ಸ್‌ಚೇಂಜ್‌ಗಳನ್ನು ಪತ್ತೆ ಮಾಡಲಾಯಿತು. ಅಲ್ಲಿ ಮುಂಬೈ ಸಮೀಪದ ಭಿವಂಡಿಯಲ್ಲೂ ನಕಲಿ ಟೆಲಿಫೋನ್ ಎಕ್ಸ್‌ಚೇಂಜ್‌ಗೆ ಲಿಂಕ್ ಇರುವುದು ತಿಳಿಯಿತು.
ಭಿವಂಡಿಯ ಅಪರಾಧ ಶಾಖೆ ವರಿಷ್ಠ ನಿರೀಕ್ಷಕ ಶೀತಲ್ ರಾವುತ್ ಮತ್ತು ಥಾಣೆ ಪೊಲೀಸ್‌ನ ಅಪರಾಧ ಶಾಖೆಯ ಯುನಿಟ್ ಒಂದರ ವರಿಷ್ಠ ನಿರೀಕ್ಷಕ ನಿತಿನ್ ಠಾಕ್ರೆಯವರ ನೇತೃತ್ವದಲ್ಲಿ ಪೊಲೀಸರು ಐದು ತಂಡ ರಚಿಸಿ ಭಿವಂಡಿಯ ಜೈಬಿ ನಗರ, ಶಾಂತಿ ನಗರ, ಭೋಯಿವಾಡಾಗಳಲ್ಲಿ ದಾಳಿ ನಡೆಸಿದರು. ಈ ದಾಳಿಯಲ್ಲಿ 34 ಸಿಮ್ ಬಾಕ್ಸ್, 400ಕ್ಕೂ ಅಧಿಕ ಸಿಮ್ ಕಾರ್ಡ್, ರೌಟರ್, ಲ್ಯಾಪ್‌ಟಾಪ್, ಮೊಬೈಲ್, ನಗದು ಹಣ ಜಪ್ತಿ ಮಾಡಲಾಗಿದೆ.
ನಕಲಿ ಟೆಲಿಫೋನ್ ಎಕ್ಸ್‌ಚೇಂಜ್‌ನ ಮೂಲಕ ಸೌದಿ ಅರೇಬಿಯ, ಯುಎಇ, ಸಿರಿಯಾ, ಇರಾಕ್ ಈ ದೇಶಗಳಿಂದ ಕರೆಗಳು ಬರುತ್ತಿತ್ತು. ಇಲ್ಲಿ ಇವೆಲ್ಲ ಲೋಕಲ್ ಕಾಲ್‌ಗಳಾಗಿರುತ್ತಿತ್ತು. ಬಂಧಿತ ಜನರು ವಿದೇಶಗಳಿಂದ ಬರುವ ವಿವಿಐಪಿ ಕಾಲ್‌ಗಳನ್ನು ರೌಟರ್‌ನ ಸಹಾಯದಿಂದ ನಕಲಿ ಎಕ್ಸ್ ಚೇಂಜ್‌ಗಳಲ್ಲಿ ಲೋಕಲ್ ಕಾಲ್‌ಗಳಾಗಿ ಪರಿವರ್ತಿಸುತ್ತಿದ್ದರು. ಕಾಲ್ ಸ್ವೀಕರಿಸುವವರಿಗೆ ವಿದೇಶದ ನಂಬರ್ ಕಾಣಿಸುತ್ತಿರಲಿಲ್ಲ. ಕಳೆದ ಮೇ ತಿಂಗಳಲ್ಲೂ ಪೊಲೀಸರು ಭಿವಂಡಿಯಲ್ಲಿ ನಾಲ್ಕು ನಕಲಿ ಟೆಲಿಫೋನ್ ಎಕ್ಸ್‌ಚೆಂಜ್‌ಗಳನ್ನು ಪತ್ತೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News