ಪ್ರತಿಪಕ್ಷಗಳಿಂದ ನ.8ರಂದು ಕರಾಳ ದಿನಾಚರಣೆ
ಹೊಸದಿಲ್ಲಿ,ಅ.24: ನೋಟು ಅಮಾನ್ಯ ಕ್ರಮಕ್ಕೆ ನ.8ರಂದು ಒಂದು ವರ್ಷ ಪೂರ್ಣಗೊಳ್ಳುತ್ತಿದ್ದು, ಅಂದು ಕರಾಳ ದಿನವನ್ನಾಗಿ ಆಚರಿಸಲು ಪ್ರತಿಪಕ್ಷಗಳು ನಿರ್ಧರಿಸಿವೆ.
ಮಂಗಳವಾರ ಇಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯೆನ್ ಮತ್ತು ಜೆಡಿಯು ಬಂಡಾಯ ನಾಯಕ ಶರದ್ ಪವಾರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು, ಬಹುಶಃ ಇದೇ ಮೊದಲ ಬಾರಿಗೆ ಪ್ರಧಾನಿಯವರು ಪ್ರಕಟಿಸಿದ್ದ ನಿರ್ಧಾರವೊಂದನ್ನು 135 ಬಾರಿ ಬದಲಿಸಬೇಕಾಗಿ ಬಂದಿತ್ತು. ಅದರ ಪರಿಕಲ್ಪನೆ ಎಷ್ಟೊಂದು ಕೆಟ್ಟದ್ದಾಗಿತ್ತು ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಹೇಳಿದರು.
ನ.8ರಂದು ಕರಾಳ ದಿನಾಚರಣೆಗೆ 18 ಪ್ರತಿಪಕ್ಷಗಳು ನಿರ್ಧರಿಸಿದ್ದು, ತಮ್ಮ ರಾಜ್ಯಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಅವು ಪ್ರತಿಭಟನೆಗಳನ್ನು ನಡೆಸಲಿವೆ ಎಂದರು.
ನೋಟು ಅಮಾನ್ಯ ಕ್ರಮವನ್ನು ‘ಭಾರೀ ಹಗರಣ’ವೆಂದು ಬಣ್ಣಿಸಿದ ಒ’ಬ್ರಿಯೆನ್ , ತನ್ನ ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅದನ್ನು ಬೆಟ್ಟು ಮಾಡಿದ್ದ ಮೊದಲ ನಾಯಕಿಯಾಗಿದ್ದರು ಎಂದರು.
ಈವರೆಗೆ ಪ್ರತಿಪಕ್ಷಗಳು ನೋಟು ಅಮಾನ್ಯ ವಿರುದ್ಧ ಪ್ರತಿಭಟನೆಗೆ ಯಾವುದೇ ಜಂಟಿ ಕಾರ್ಯಕ್ರಮವನ್ನು ಪ್ರಕಟಿಸಿಲ್ಲ.
ಸೋಮವಾರ ಸಮನ್ವಯ ಸಮಿತಿಯೊಂದನ್ನು ರೂಪಿಸಿಕೊಂಡಿದ್ದ ಪ್ರತಿಪಕ್ಷಗಳು ಸಂಸತ್‌ನಲ್ಲಿ ಮೊದಲ ಸಭೆಯನ್ನು ನಡೆಸಿ, ತಮ್ಮ ರಾಜ್ಯಗಳಲ್ಲಿ ನೋಟು ಅಮಾನ್ಯದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ನಿರ್ಧರಿಸಿದ್ದವು.
ಮೋದಿ ಸರಕಾರದ ಆರ್ಥಿಕ ನೀತಿಗಳು ಮತ್ತು ಸಂಘಟಿತ ಹಾಗೂ ಅಸಂಘಟಿತ ಕ್ಷೇತ್ರಗಳ ಮೇಲೆ ಅದರ ಪರಿಣಾಮದ ವಿರುದ್ಧ ನ.8ರಿಂದ ಮೂರು ದಿನಗಳ ಕಾಲ ಪ್ರತಿಭಟನೆಗಳನ್ನು ನಡೆಸಲು ಕೇಂದ್ರೀಯ ಕಾರ್ಮಿಕ ಒಕ್ಕೂಟಗಳು ಉದ್ದೇಶಿಸಿವೆ.
ಸಮನ್ವಯ ಸಮಿತಿಯು ಸಂಸತ್ ಅಧಿವೇಶನಕ್ಕೆ ಮುನ್ನ ಮತ್ತೊಮ್ಮೆ ಸಭೆ ಸೇರಲಿದೆ ಎಂದು ಓ’ಬ್ರಿಯೆನ್ ತಿಳಿಸಿದರು.