ನಿಮ್ಮ ವಿಮಾ ಪಾಲಿಸಿ ರದ್ದಾಗಿದ್ದರೆ ನೀವೇನು ಮಾಡಬೇಕು?

Update: 2017-10-25 10:22 GMT

ಜನರು ತಮ್ಮ ನಂತರ ತಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆಯನ್ನೊದಗಿಸಲು ಜೀವವಿಮೆ ಯನ್ನು ಮಾಡಿಸುವುದು ಸಾಮಾನ್ಯವಾಗಿದೆ. ಟರ್ಮ್ ಇನ್ಶೂರನ್ಸ್ ಪ್ಲಾನ್ ಅಥವಾ ಸಾವಧಿ ವಿಮಾ ಯೋಜನೆಯು ವಿಮಾದಾರನ ನಿಧನದ ಬಳಿಕ ಆತನ ಕುಟುಂಬಕ್ಕೆ ಗರಿಷ್ಠ ಹಣಕಾಸು ಪರಿಹಾರವನ್ನು ನೀಡುವ ಅಗ್ಗದ ಮತ್ತು ಸುರಕ್ಷಿತ ಮಾರ್ಗವಾಗಿದೆ.

ಕಡಿಮೆ ವಾರ್ಷಿಕ ಪ್ರೀಮಿಯಂ ದರ ಮತ್ತು ಪ್ರಾಥಮಿಕ ಆರೋಗ್ಯ ತಪಾಸಣೆ ಯೊಂದಿಗೆ ಯಾರೇ ಆದರೂ ಒಳ್ಳೆಯ ವಿಮಾ ಯೋಜನೆಯನ್ನು ಖರೀದಿಸಬಹು ದಾಗಿದೆ.

  ಆದರೆ ಸಮಯಕ್ಕೆ ಸರಿಯಾಗಿ ವಿಮೆಯ ಕಂತನ್ನು ಕಟ್ಟದಿದ್ದರೆ ಏನಾಗುತ್ತದೆ? ಅದರಿಂದ ನಿಮ್ಮ ವಿಮಾ ಪಾಲಿಸಿಯು ರದ್ದುಗೊಳ್ಳುತ್ತದೆಯೇ? ರದ್ದಾದರೆ ಅದನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿದೆಯೇ? ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

 ನೀವು ಯಾವುದೇ ಬಗೆಯ ವಿಮಾ ಪಾಲಿಸಿಯನ್ನು ಖರೀದಿಸಿದಾಗ ಪಾಲಿಸಿಯ ಅವಧಿಯು ಮುಗಿಯುವವರೆಗೆ ನಿಯಮಿತವಾಗಿ ಪ್ರತಿ ವರ್ಷ ಅಥವಾ ಆರು ತಿಂಗಳು ಅಥವಾ ಮೂರು ತಿಂಗಳಿಗೆ ನಿಗದಿತ ವಿಮಾ ಕಂತನ್ನು ಕಟ್ಟಬೇಕಾಗುತ್ತದೆ. ವೇತನದಾರರಿಗೆ ಪ್ರತಿ ತಿಂಗಳು ಸಂಬಳದಲ್ಲಿ ವಿಮೆ ಕಂತು ಕಡಿತಗೊಳ್ಳುತ್ತದೆ. ಕಾರಣಾಂತರದಿಂದ ಕಂಪನಿಯು ನೀಡಿರುವ ಗ್ರೇಸ್ ಪಿರಿಯಡ್ ಅಥವಾ ರಿಯಾಯಿತಿ ಅವಧಿಯಲ್ಲಿಯೂ ಕಂತನ್ನು ಕಟ್ಟಲು ಸಾಧ್ಯವಾಗದಿದ್ದರೆ ನಿಮ್ಮ ವಿಮಾ ಪಾಲಿಸಿಯು ರದ್ದಾಗುತ್ತದೆ. ಹೀಗೆ ರದ್ದಾದ ಪಾಲಿಸಿಯನ್ನು ಪುನರುಜ್ಜೀವನಗೊಳಿಸುವುದು ಸುಲಭವಲ್ಲ ಮತ್ತು ಕೆಲವೊಮ್ಮೆ ಹೊಸದಾಗಿ ಪಾಲಿಸಿಯನ್ನು ಖರೀದಿಸುವುದು ನಿಮಗಿರುವ ಏಕಮಾತ್ರ ಪರ್ಯಾಯವಾಗಿ ರುತ್ತದೆ. ಇದು ಪಾಲಿಸಿದಾರನ ವಯಸ್ಸು ಏರಿಕೆಯಾಗಿರುವುದರಿಂದ ಹಲವೊಮ್ಮೆ ಮೊದಲಿಗಿಂತ ದುಬಾರಿಯಾಗುತ್ತದೆ.

ನೀವು ವಿಮಾ ಕಂತನ್ನು ಸಕಾಲದಲ್ಲಿ ಕಟ್ಟಿರದಿದ್ದರೆ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿಯಿಲ್ಲಿದೆ.

    ವಿಮಾಕಂತನ್ನು ತುಂಬಲು ಪಾಲಿಸಿದಾರ ವಿಫಲನಾದಾಗ ಅದು ರಿಯಾಯತಿ ಅವಧಿ ವರ್ಗಕ್ಕೆ ಸೇರುತ್ತದೆ. ಈ ರಿಯಾಯಿತಿ ಅವಧಿಯಲ್ಲಿ ಪಾಲಿಸಿದಾರ ಮೃತಪಟ್ಟರೆ ಆತನ ಕುಟುಂಬಕ್ಕೆ ವಿಮಾ ಮೊತ್ತವನ್ನು ನೀಡುವ ಬಾಧ್ಯತೆ ವಿಮಾ ಕಂಪನಿಯ ಮೇಲಿರುತ್ತದೆ. ಸಾಮಾನ್ಯವಾಗಿ ವಿಮಾ ಕಂಪನಿಯು ಒಂದು ವರ್ಷ ಮತ್ತು ಆರು ತಿಂಗಳ ಕಂತಿಗೆ 30 ದಿನಗಳ ಮತ್ತು ಮೂರು ತಿಂಗಳ ಕಂತಿಗೆ 15 ದಿನಗಳ ರಿಯಾಯಿತಿ ಅವಧಿಯನ್ನು ನೀಡುತ್ತದೆ. ಇದು ಬೇರೆ ಬೇರೆ ವಿಮಾ ಕಂಪನಿಗಳಿಗೆ ಬೇರೆ ಬೇರೆಯಾಗಿರಬಹುದು. ಪಾಲಿಸಿದಾರ ಈ ಅವಧಿ ಮುಗಿಯುವ ಮುನ್ನ ತನ್ನ ಬಾಕಿಯುಳಿದಿರುವ ಕಂತನ್ನು ಕಟ್ಟಬೇಕಾಗುತ್ತದೆ. ರಿಯಾಯಿತಿ ಅವಧಿಯು ಮುಗಿದ ಬಳಿಕ ಪಾಲಿಸಿಯನ್ನು ಪುನಃ ಕ್ರಿಯಾಶೀಲವಾಗಿಸಲು ಬಾಕಿಯುಳಿದ ಹಣವನ್ನು ಕಟ್ಟಲು ಸಾಧ್ಯವಾಗದಿದ್ದರೆ ಪಾಲಿಸಿದಾರನ ನಿಧನದ ನಂತರ ಆತನ ಕುಟಂಬಕ್ಕೆ ಯಾವುದೇ ಪರಿಹಾರ ಲಭಿಸುವುದಿಲ್ಲ.

ಆದರೆ ರದ್ದಾದ ವಿಮಾ ಪಾಲಿಸಿ ಸಂಪೂರ್ಣ ವ್ಯರ್ಥವಲ್ಲ. ಅದು ಮತ್ತೊಮ್ಮೆ ಉಪಯೋಗಕ್ಕೆ ಬರುವಂತಾಗಲು ಪುನರುಜ್ಜೀವನ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. ಹಲವಾರು ಕಂಪನಿಗಳು ರದ್ದಾದ ಪಾಲಿಸಿಗಳ ಪುನರುಜ್ಜೀವನಕ್ಕೆ ಅವಕಾಶ ನೀಡುತ್ತವೆ. ಆದರೆ ಈ ಪ್ರಕ್ರಿಯೆ ವೆಚ್ಚದಾಯಕವಾಗಬಹುದು ಮತ್ತು ಇನ್ನೊಮ್ಮೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗಬಹುದು. ಜೊತೆಗೆ ದಂಡವನ್ನೂ ಪಾವತಿಸಬೇಕಾಗಬಹುದು.

ರಿಯಾಯಿತಿ ಅವಧಿ ಮುಗಿದ ಬಳಿಕ ಮತ್ತು ಪಾಲಿಸಿದಾರ ಹಾಗು ಕಂಪನಿಯ ನಡುವಿನ ಒಪ್ಪಂದ ಅಸ್ತಿತ್ವವನ್ನು ಕಳೆದುಕೊಂಡಿದ್ದಾಗ ಮಾತ್ರ ಪುನರುಜ್ಜೀವನ ಪ್ರಕ್ರಿಯೆಯನ್ನು ನಡೆಸಬಹುದಾಗಿದೆ. ಈ ಪ್ರಕ್ರಿಯೆಯು ವಿಭಿನ್ನ ವಿಮಾ ಕಂಪನಿಗಳಿಗೆ ವಿಭಿನ್ನವಾಗಿರಬಹುದು ಮತ್ತು ರದ್ದುಗೊಂಡ ಅವಧಿ, ಪಾಲಿಸಿಯ ಮಾದರಿ ಮತ್ತು ವಿಮಾ ವೆಚ್ಚ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಪಾಲಿಸಿದಾರ ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಿ ತನ್ನ ಪಾಲಿಸಿಯನ್ನು ಪುನರುಜ್ಜೀವನಗೊಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News