ದತ್ತು ಪ್ರಕ್ರಿಯೆಯ ತನಿಖೆ ನಡೆಸುವಂತೆ ಸುಷ್ಮಾ ಸ್ವರಾಜ್ ಮನವಿ
ಹೊಸದಿಲ್ಲಿ, ಅ. 27: ಅಮೆರಿಕದ ಉಪನಗರದ ಕಾಲುವೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 3 ವರ್ಷದ ಬಾಲಕಿ ಶೆರಿನ್ ಮ್ಯಾಥ್ಯೂ ದತ್ತು ಪ್ರಕ್ರಿಯೆಯ ತನಿಖೆ ನಡೆಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಲ್ಲಿ ವಿನಂತಿಸಿದ್ದಾರೆ.
ಶೆರಿನ್ ಅಕ್ಟೋಬರ್ 7ರಂದು ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಮೃತದೇಹ ಟೆಕ್ಸಾಸ್ ದಲ್ಲಾಸ್ ಉಪನಗರದ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಶೆರಿನ್ ತಂದೆ ವೆಸ್ಲೆ ಮ್ಯಾಥ್ಯೂ ಅವರನ್ನು ಬಂಧಿಸಲಾಗಿತ್ತು. ಆದರೆ, ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಅನಂತರ ಸೋಮವಾರ ಅವರನ್ನು ಮರು ಬಂಧಿಸಲಾಗಿದೆ.
ಬೇಬಿ ಸರಸ್ವತಿ ಆಲಿಯಾಸ್ ಶೆರಿನ್ ಮ್ಯಾಥ್ಯೂ ಪ್ರಕರಣದಲ್ಲಿ ದತ್ತು ಪ್ರಕ್ರಿಯೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಗೆ ಮನವಿ ಮಾಡಲಾಗಿದೆ ಎಂದು ಸುಷ್ಮಾ ಸ್ವರಾಜ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕು ಹಾಗೂ ಇನ್ನು ಮುಂದೆ ದತ್ತು ಮಕ್ಕಳಿಗೆ ಪಾಸ್‌ಪೋರ್ಟ್‌ಗಳನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅನುಮೋದನೆಯ ಬಳಿಕವೇ ನೀಡಬೇಕು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ದತ್ತು ಪಡೆದುಕೊಳ್ಳಲು ಇರುವ ನೋಡೆಲ್ ಸಂಸ್ಥೆ ಚೈಲ್ಡ್ ಇಂಡಿಯಾ ಅಡಾಪ್ಶನ್ ರಿಸೋರ್ಸ್ ಅಥಾರಿಟಿ (ಸಿಎಆರ್‌ಎ) ಅಮೆರಿಕದ ಸೆಂಟ್ರಲ್ ಅಥಾರಿಟಿ ಫಾರ್ ಅಡಾಪ್ಶನ್‌ಗೆ ಪತ್ರ ಬರೆದು ಶೆರಿನ್‌ಳ ಸಾವಿನ ಬಗ್ಗೆ ವಿವರ ಕೇಳಿದೆ ಎಂದು ಮೂಲಗಳು ತಿಳಿಸಿವೆ.