ಉ. ಪ್ರದೇಶ ಬಿಎಚ್‌ಯು ಆಸ್ಪತ್ರೆ : ಸಚಿವರ ಭೇಟಿಯ ಕಾರಣಕ್ಕೆ ಶಸ್ತ್ರ ಚಿಕಿತ್ಸೆಯನ್ನೇ ಮುಂದೂಡಿದರು....!
ಲಕ್ನೊ, ಅ.27: ಮೂರು ದಿನಗಳ ಅರಿವಳಿಕೆ ಶಾಸ್ತ್ರದ ಕುರಿತ ಸಮ್ಮೇಳನ ನಡೆಯುವ ಕಾರಣ ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಒಳಪಟ್ಟಿರುವ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಐಎಂಎಸ್) ಮತ್ತು ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ 27 ಮತ್ತು 28ರಂದು ಯಾವುದೇ ಶಸ್ತ್ರಚಿಕಿತ್ಸೆ ನಡೆಯುವುದಿಲ್ಲ ಎಂದು ಪ್ರಕಟಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಆಸ್ಪತ್ರೆಯಲ್ಲಿ ಹಾಗೂ ತುರ್ತುಚಿಕಿತ್ಸಾ ಘಟಕದಲ್ಲಿ ಈ ಮೊದಲೇ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕೇಂದ್ರ ಸಂಪನ್ಮೂಲ ಸಚಿವಾಲಯದ ಸಹಾಯಕ ಸಚಿವ ಸತ್ಯಪಾಲ್ ಸಿಂಗ್ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸುವ ಕಾರಣ ಈ ಪ್ರಕಟಣೆ ಹೊರಡಿಸಿರುವುದಾಗಿ ವಿವಿಯ ಮೂಲಗಳು ತಿಳಿಸಿವೆ. ಐಎಂಎಸ್‌ನ ಅರಿವಳಿಕೆ ಶಾಸ್ತ್ರ ವಿಭಾಗವು ಈ ನಿರ್ಧಾರ ತೆಗೆದುಕೊಂಡಿದ್ದು , ಈ ಮೂರು ದಿನ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಯನ್ನು ಇತರ ಆಸ್ಪತ್ರೆಗೆ ವರ್ಗಾಯಿಸುವಂತೆ ಅಥವಾ ಮುಂದೂಡುವಂತೆ ಸುತ್ತೋಲೆ ಹೊರಡಿಸಿದೆ. ಆಸ್ಪತ್ರೆಯು ಎರಡನೇ ಆಯ್ಕೆಯನ್ನು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಆಸ್ಪತ್ರೆಯಲ್ಲಿ ಸುಮಾರು 100ಕ್ಕೂ ಹೆಚ್ಚು ರೋಗಿಗಳ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿದ್ದು ಇದರಲ್ಲಿ ಗಂಭೀರವಾದ ಹಾಗೂ ಗಂಭೀರ ಪ್ರಮಾಣವಲ್ಲದ ರೋಗಿಗಳೂ ಸೇರಿದ್ದಾರೆ. ಯಾವಾಗ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂಬ ಬಗ್ಗೆ ತಮಗೆ ತಿಳಿಸಲಾಗಿಲ್ಲ ಎಂದು ರೋಗಿಗಳ ಆರೈಕೆಗೆ ಬಂದಿರುವವರು ದೂರಿದ್ದಾರೆ.
ನಿಯಮದ ಪ್ರಕಾರ ಆಸ್ಪತ್ರೆಯ ಶೇ.50ರಷ್ಟು ಸಿಬ್ಬಂದಿ ಏಕಕಾಲಕ್ಕೆ ರಜೆ ಹಾಕಬಹುದು. ಆದರೆ ಈ ಪ್ರಕರಣದಲ್ಲಿ ವಿವಿ ನಿಯಮವನ್ನು ಉಲ್ಲಂಘಿಸಿದೆ. ಓರ್ವ ಸಚಿವರ ಭೇಟಿ ಕಾರಣಕ್ಕೆ ನೂರಾರು ಜೀವಗಳನ್ನು ಅಪಾಯಕ್ಕೆ ಒಡ್ಡುವುದು ಸರಿಯೇ ಎಂಬ ದೂರು ಕೇಳಿಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತುರ್ತು ಚಿಕಿತ್ಸಾ ಘಟಕದ ಉಸ್ತುವಾರಿ ಪ್ರೊಫೆಸರ್ ಡಾ ಸಂಜೀವ್ ಗುಪ್ತ, ತುರ್ತು ಚಿಕಿತ್ಸಾ ಘಟಕದಲ್ಲಿ ಪೂರ್ವ ನಿಗದಿತ ರೀತಿಯಲ್ಲೇ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.