ನಗದು ನಿಷೇಧಕ್ಕೆ ಒತ್ತಾಯಿಸಿದ್ದರೆ ರಾಜೀನಾಮೆ ನೀಡುತ್ತಿದ್ದೆ: ಚಿದಂಬರಂ
ಹೊಸದಿಲ್ಲಿ, ಅ. 28: ಕಳೆದ ವರ್ಷ ನವೆಂಬರ್‌ನಲ್ಲಿ ನಗದು ನಿಷೇಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, “ಈ ರೀತಿಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಬಲವಂತ ಮಾಡಿದ್ದರೆ ನಾನು ವಿತ್ತ ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ” ಎಂದಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ಬುಲೆಟ್ ಟ್ರೈನ್ ಯೋಜನೆಯ ಆತುರದ ಅನುಷ್ಠಾನದ ಬಗ್ಗೆ ಕೂಡ ಅವರು ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದು ವೇಳೆ ಪ್ರಧಾನಿ ನಗದು ನಿಷೇಧದ ಬಗ್ಗೆ ನನ್ನಲ್ಲಿ ಕೇಳಿದ್ದರೆ, ಹಾಗೆ ಮಾಡಬೇಡಿ ಎಂದು ಸಲಹೆ ನೀಡುತ್ತಿದ್ದೆ. ನಗದು ನಿಷೇಧಕ್ಕೆ ಅವರು ಸೂಚಿಸಿದ್ದರೆ, ನಾನು ವಿತ್ತ ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ನಗದು ನಿಷೇಧ ಹಾಗೂ ಜಿಎಸ್‌ಟಿ ಮೋದಿ ಸರಕಾರದ ಎರಡು ಪ್ರಮಾದಗಳು ಎಂದು ಉಲ್ಲೇಖಿಸಿದ ಅವರು, ನಗದು ನಿಷೇಧ ಕೆಟ್ಟ ಚಿಂತನೆ. ಜಿಎಸ್‌ಟಿ ಉತ್ತಮ ಚಿಂತನೆ. ಆದರೆ, ಅದನ್ನು ತರಾತುರಿಯಿಂದ ಅನುಷ್ಠಾನಗೊಳಿಸಲಾಯಿತು. ಜಿಎಸ್‌ಟಿಯನ್ನು ಕಾಳಜಿ ಹಾಗೂ ಎಚ್ಚರದಿಂದ ಅನುಷ್ಠಾನಗೊಳಿಸಬೇಕಿತ್ತು ಎಂದರು. ಅಹ್ಮದಾಬಾದ್ ಹಾಗೂ ಮುಂಬೈ ನಡುವಿನ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಪ್ರಧಾನಿ ಆದ್ಯತೆ ನೀಡಬಾರದಿತ್ತು ಎಂದು ಅವರು ಹೇಳಿದರು.
ಸ್ಥಳೀಯ ವ್ಯಾಪಾರಿ ಸಮುದಾಯ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅವರು ಆರ್ಥಿಕತೆ ಕುರಿತು ಮಾತನಾಡಿದರು.