ಪ್ರಧಾನಿಯ ಬೀದರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ: ಸಿಎಂ

Update: 2017-10-28 17:58 GMT

 ಬೆಂಗಳೂರು, ಅ. 28: ಬೀದರ್‌ನಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ರೈಲ್ವೆ ಇಲಾಖೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ.

ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿವಾರ ಬೀದರ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ತಡವಾಗಿ ಆಹ್ವಾನ ಕೊಟ್ಟಿದ್ದಾರೆ. ಇದಲ್ಲದೆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವಾಗ ರಾಜ್ಯ ಸರಕಾರವನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಯೋಜನೆ ಕುರಿತು ರೈಲ್ವೆ ಅಧಿಕಾರಿಗಳು ನಮ್ಮೆಂದಿಗೆ ಮೊದಲೇ ಚರ್ಚೆ ಮಾಡಬೇಕಿತ್ತು. ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ರೈಲ್ವೆ ಯೋಜನೆಗಳ ವೆಚ್ಚದಲ್ಲಿ ರಾಜ್ಯ ಸರಕಾರ ಅರ್ಧ ಭರಿಸುತ್ತದೆ. ಜೊತೆಗೆ ಜಾಗವನ್ನು ಉಚಿತವಾಗಿ ಒದಗಿಸುತ್ತದೆ. ಹೀಗಿರುವಾಗ ಕಾರ್ಯಕ್ರಮದ ರೂಪುರೇಷೆ ಕುರಿತು ಪೂರ್ವಭಾವಿಯಾಗಿ ಚರ್ಚೆ ಮಾಡದೆ ಕೊನೆ ಗಳಿಗೆಯಲ್ಲಿ ಆಹ್ವಾನ ನೀಡಿದರೆ ಹೋಗಲು ಸಾಧ್ಯವಿಲ್ಲ. ಸರಕಾರದ ಪರವಾಗಿ ಸಚಿವ ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು.

ಯಡಿಯೂರಪ್ಪ ರಾಜೀನಾಮೆ ನೀಡಲಿ: ನೈತಿಕತೆ ಬಗ್ಗೆ ಮಾತನಾಡುತ್ತಿರುವ ಯಡಿಯೂರಪ್ಪ ಅವರ ಮೇಲೆಯೂ ವಿವಿಧ ಪ್ರಕರಣ ದಾಖಲಾಗಿವೆ. ಅವರಲ್ಲಿ ನೈತಿಕತೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ವಂಚನೆ, ಫೋರ್ಜರಿ, ಡಿನೋಟಿಫಿಕೇಷನ್ ಅವ್ಯವಹಾರ ಸೇರಿದಂತೆ ಯಡಿಯೂರಪ್ಪ ಅವರ ಮೇಲೆ ಹಲವಾರು ಕೇಸುಗಳಿವೆ. ಇದನ್ನು ತಾನು ಸೃಷ್ಟಿ ಮಾಡಿಕೊಂಡು ಹೇಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಯಡಿಯೂರಪ್ಪಅವರು ತಮ್ಮ ಮೇಲಿನ ಕೇಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬಿಜೆಪಿಯವರು ಮತ್ತೊಬ್ಬರ ತಟ್ಟೆಯಲ್ಲಿ ನೊಣ ತೋರಿಸಲು ಹೊರಟಿದ್ದಾರೆ ಎಂದು ಕುಟುಕಿದರು.

ಸಚಿವ ಜಾರ್ಜ್ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಷ್ಟೊಂದು ಕೇಸುಗಳಿರುವಾಗ ಯಡಿಯೂರಪ್ಪಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅರ್ಹರೇ. ಅದೂ ಅಲ್ಲದೆ ಅವರು ಮುಖ್ಯಮಂತ್ರಿ ಅಭ್ಯರ್ಥಿ ಬೇರೆ ಎಂದು ವ್ಯಂಗ್ಯವಾಡಿದರು.

ನಾನು ಜಾರ್ಜ್ ರಕ್ಷಣೆಗೆ ನಿಂತಿಲ್ಲ. ಆದರೆ ಕಾನೂನು ಪರ ಇದ್ದೇನೆ. ಸಿಬಿಐಗೆ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ಜಾರ್ಜ್ ರಾಜೀನಾಮೆ ನೀಡಬೇಕು ಎಂಬುದು ತಪ್ಪು. ಸಿಬಿಐ ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಹೀಗಿರುವಾಗ ತೊಂದರೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬ್ರಾಹ್ಮಣ ಪ್ರಾಧಿಕಾರ ರಚನೆ ಇಲ್ಲ: ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಉದ್ದೇಶ ಸರಕಾರಕ್ಕೆ ಇಲ್ಲ. ಅಂತಹ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News