ಎಂಎನ್‌ಎಸ್ ಮುಖಂಡನ ಮೇಲೆ ವ್ಯಾಪಾರಿಗಳಿಂದ ಹಲ್ಲೆ
ಮುಂಬೈ, ಅ.29: ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮುಖಂಡ ಸುಷಾಂತ್ ಮಲವಾಡೆ ಎಂಬವರ ಮೇಲೆ ಬೀದಿಬದಿ ವ್ಯಾಪಾರಿಗಳ ಗುಂಪೊಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಮಲವಾಡೆ ನಡೆದುಕೊಂಡು ಹೋಗುತ್ತಿದ್ದಾಗ ವ್ಯಾಪಾರಿಗಳ ತಂಡವೊಂದು ಕಬ್ಬಿಣದ ರಾಡ್, ಹಾಕಿಸ್ಟಿಕ್ ಮತ್ತು ಹರಿತವಾದ ಆಯುಧದಿಂದ ಅವರ ಮೇಲೆ ದಾಳಿ ನಡೆಸಿದೆ. ಮಲವಾಡೆಯವರ ತಲೆಯ ಹಿಂಭಾಗಕ್ಕೆ ಏಟು ಬಿದ್ದಿದ್ದು ಅವರು ಸ್ಥಳದಲ್ಲೇ ಕುಸಿದುಬಿದ್ದರು ಎಂದು ಎಂಎನ್‌ಎಸ್ ಕಾರ್ಯದರ್ಶಿ ಸಚಿನ್ ಮೋರೆ ತಿಳಿಸಿದ್ದಾರೆ.
ಈ ಘಟನೆ ಕಾಂಗ್ರೆಸ್ ಹಾಗೂ ಎಂಎನ್‌ಎಸ್ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ನಗರಪಾಲಿಕೆ ಕ್ರಮವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಎಂಎನ್‌ಎಸ್ ಮುಖಂಡರ ವಿರುದ್ಧ ಬೀದಿಬದಿ ವ್ಯಾಪಾರಿಗಳನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಎಂಎನ್‌ಎಸ್ ಆರೋಪಿಸಿದೆ. ಘಟನೆಗೂ ತುಸು ಮೊದಲು ನಿರುಪಮ್, ಬೀದಿ ಬದಿ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿದ್ದರು ಎಂದು ಎಂಎನ್‌ಎಸ್ ತಿಳಿಸಿದೆ.
ಆದರೆ ಈ ಆರೋಪವನ್ನು ನಿರುಪಮ್ ನಿರಾಕರಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ಜೊತೆ ನಡೆದ ಮಾತುಕತೆ ಪೂರ್ವನಿಗದಿತವಾಗಿತ್ತು. ಎಂಎನ್‌ಎಸ್ ಕಾರ್ಯಕರ್ತರು ಬೀದಿಬದಿ ವ್ಯಾಪಾರಿಗಳ ಮೇಲೆ ಆಕ್ರಮಣ ನಡೆಸಿದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಆಕ್ರಮಣ ನಡೆಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳ ದಂತೆ ಬಿಜೆಪಿ ಸರಕಾರ ಸೂಚಿಸಿದೆ. ಆದ್ದರಿಂದ ಬೀದಿಬದಿ ವ್ಯಾಪಾರಿಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ ಅನಿವಾರ್ಯತೆಯಿದೆ. ನಿಮ್ಮ ಮೇಲೆ ಹಲ್ಲೆ ನಡೆದರೆ ತಿರುಗೇಟು ನೀಡಿ ಎಂದು ನಾನವರಿಗೆ ಹೇಳಿದ್ದೇನೆ. ಎಂಎನ್‌ಎಸ್ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮಲವಾಡೆ ಮೇಲೆ ನಡೆದ ಹಲ್ಲೆಗೆ ಪ್ರತೀಕಾರವಾಗಿ ಎಂಎನ್‌ಎಸ್ ಕಾರ್ಯಕರ್ತರು ಶನಿವಾರ ಸಂಜೆ ದಾದರ್‌ನಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ಅಂಗಡಿಯ ಸಮಾಗ್ರಿಗಳನ್ನು ಸಾಮಾನುಗಳನ್ನು ಕಿತ್ತೆಸೆದು ನಾಶಗೊಳಿಸಿದ್ದಾರೆ.