×
Ad

ಮೊಬೈಲ್‌ಗೆ ಆಧಾರ್ ಜೋಡಣೆ ಕಡ್ಡಾಯವೇಕೆ?: ಕೇಂದ್ರ ಸರಕಾರದಿಂದ ವಿವರಣೆ ಕೋರಿದ ಸುಪ್ರೀಂ

Update: 2017-10-30 22:18 IST

ಹೊಸದಿಲ್ಲಿ, ಅ.30: ಜನರು ತಮ್ಮ ಮೊಬೈಲ್ ನಂಬರನ್ನು ಆಧಾರ್‌ಗೆ ಜೋಡಿಸುವುದನ್ನು ಕಡ್ಡಾಯಗೊಳಿಸಲು ಕಾರಣವೇನು ಎಂಬ ಬಗ್ಗೆ ಒಂದು ತಿಂಗಳೊಳಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

 ಮೊಬೈಲ್ ನಂಬರನ್ನು ಆಧಾರ್ ಸಂಖ್ಯೆಗೆ ಜೋಡಿಸಲು ನಿಗದಿಗೊಳಿಸಿರುವ ಅಂತಿಮ ದಿನಾಂಕವನ್ನು ಸರಕಾರ ಫೆಬ್ರವರಿಯವರೆಗೆ ಮುಂದೂಡಿದೆ. ಮುಂದಿನ ದಿನದಲ್ಲಿ ಫೋನ್ ಸಂಪರ್ಕ ನೀಡುವ ಮೊದಲು ಆಧಾರ್ ನಂಬರ್ ಪರಿಶೀಲನೆ ನಡೆಸುವುದಾಗಿ ಟೆಲಿಫೋನ್ ಕಂಪೆನಿಗಳು ತಿಳಿಸಿವೆ.

ಆದರೆ ಈ ಆದೇಶವನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತನ್ನ ಫೋನ್ ಸಂಪರ್ಕ ಕಡಿತಗೊಂಡರೂ ತೊಂದರೆಯಿಲ್ಲ. ಮೊಬೈಲ್ ನಂಬರನ್ನು ಆಧಾರ್‌ಗೆ ಜೋಡಿಸುವುದಿಲ್ಲ ಎಂದು ತಿಳಿಸಿದ್ದರು. ಅಲ್ಲದೆ ಸರಕಾರದ ಜನಹಿತ ಯೋಜನೆಗಳ ಸೌಲಭ್ಯ ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಹೊಂದಿರಬೇಕು ಎಂಬ ಕೇಂದ್ರ ಸರಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಈ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಪೀಠವು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರವೊಂದು ಸಂಸತ್ತಿನಲ್ಲಿ ನಿರ್ಧಾರವಾಗಿರುವ ಕಾಯ್ದೆಗಳನ್ನು ಪ್ರಶ್ನಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಆದರೆ ಮಮತಾ ಬ್ಯಾನರ್ಜಿ ತಮ್ಮ ಅರ್ಜಿಯಲ್ಲಿ ದಾಖಲಿಸಿದ್ದ ಮತ್ತೊಂದು ಅಂಶವಾದ- ಮೊಬೈಲ್ ಫೋನ್‌ಗೆ ಆಧಾರ್ ಜೋಡಣೆ ಕಡ್ಡಾಯ ಎಂಬ ವಿಷಯವನ್ನು ಪರಿಗಣಿಸಿತು ಹಾಗೂ ಒಂದು ತಿಂಗಳೊಳಗೆ ಈ ಕುರಿತು ವಿವರಣೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News