ಜಿಎಸ್‌ಟಿಯ ದೋಷಯುಕ್ತ ಅನುಷ್ಠಾನ ಉದ್ಯೋಗಗಳು ಮತ್ತು ಉದ್ಯಮಿಗಳನ್ನು ಕೊಂದಿದೆ: ಮನಮೋಹನ್ ಸಿಂಗ್
ಹೊಸದಿಲ್ಲಿ,ಅ.30: ಸರಕುಗಳು ಮತ್ತು ಸೇವಾ ತೆರಿಗೆಗಳ ವ್ಯವಸ್ಥೆಯನ್ನು ತುಂಬ ಕೆಟ್ಟದಾಗಿ ಜಾರಿಗೊಳಿಸಲಾಗಿದ್ದು ಅದರ ಪಾಲನೆಯಲ್ಲಿನ ಜಟಿಲತೆಯು ಉದ್ಯೋಗಗಳು ಮತ್ತು ಉದ್ಯಮಿಗಳನ್ನು ಕೊಂದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋಮವಾರ ಇಲ್ಲಿ ಹೇಳಿದರು.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಜಿಎಸ್‌ಟಿ ಕುರಿತ ಸಭೆಯಲ್ಲಿ ಜಿಎಸ್‌ಟಿಯ ದೋಷಪೂರ್ಣ ಜಾರಿಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಸಿಂಗ್, ನೋಟು ಅಮಾನ್ಯ ಕ್ರಮವು ಸಂಘಟಿತ ಲೂಟಿ ಮತ್ತು ಕಾನೂನುಬದ್ಧ ದರೋಡೆಯಾಗಿದ್ದರೆ ಜಿಎಸ್‌ಟಿಯು ಸಾಮಾನ್ಯ ಜನರ ಜೀವನೋಪಾಯಗಳನ್ನು ಕಿತ್ತುಕೊಳ್ಳುತ್ತಿದೆ ಮತ್ತು ಉದ್ಯಮಗಳನ್ನು ಮುಚ್ಚಿಸುತ್ತಿದೆ ಎಂದು ಹೇಳಿದರು ಎಂದು ಕಾಂಗ್ರೆಸ್ ವಕ್ತಾರ ರಣದೀಪ ಸಿಂಗ್ ಸುರ್ಜೆವಾಲಾ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸಿಂಗ್ ಅವರಲ್ಲದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ,ಮಾಜಿ ಕೇಂದ್ರ ಸಚಿವರಾದ ಪಿ.ಚಿದಂಬರಂ ಮತ್ತು ಜೈರಾಮ ರಮೇಶ, ಕಾಂಗ್ರೆಸ್ ಆಡಳಿತದ ರಾಜ್ಯಗಳ ಹಣಕಾಸು ಸಚಿವರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.