ಪ್ರೀತಿಗಾಗಿ ವಿಮಾನ ಹೈಜಾಕ್ ಬೆದರಿಕೆ ಪತ್ರ
ಮುಂಬೈ, ಅ. 30: ಬಾಲಿವುಡ್ ಚಿತ್ರಗಳಲ್ಲಿನ ಏಕಮುಖ ಪ್ರೀತಿಗಾಗಿ ಸಂಚು ರೂಪಿಸುವಂತಹ ವಿಷಯಗಳಿಂದ ಪ್ರಭಾವಿತರಾದ ಬಿರಿಜು ಕಿಶೋರ್ ಸಲ್ಲಾ ಸೋಮವಾರ ಮುಂಬೈಯಿಂದ ದಿಲ್ಲಿಗೆ ಹೊರಟಿದ್ದ ಜೆಟ್ ಏರ್‌ವೇಸ್ ವಿಮಾನವನ್ನು ಹೈಜಾಕ್ ಮಾಡುವ ಬೆದರಿಕೆ ಪತ್ರ ಇರಿಸಿದ್ದರು ಎಂದು ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ. ಜೆಟ್ ಏರ್‌ವೇಸ್‌ನ ಗನನಸಖಿಗೆ 37ರ ಹರೆಯದ ಸಲ್ಲಾ ಮನಸೋತಿದ್ದ. ಹೇಗಾದರೂ ಮಾಡಿ ವಿಮಾನವನ್ನು ಕೆಳಗಿಳಿಸಿದರೆ ಗಗನ ಸಖಿ ಕೆಲಸ ಕಳೆದುಕೊಳ್ಳುತ್ತಾಳೆ. ಆನಂತರ ಆಕೆ ನನ್ನ ಬಳಿ ಕೆಲಸಕ್ಕಾಗಿ ವಿನಂತಿಸುತ್ತಾಳೆ ಎಂದು ಸಲ್ಲಾ ನಿರೀಕ್ಷಿಸಿದ್ದರು.
ಸಲ್ಲಾ ಮುಂಬೈ ಉಪನಗರ ಥಾಣೆಯಲ್ಲಿ ಭೂ ಉದ್ಯಮ ನಡೆಸುತ್ತಿದ್ದಾರೆ. ಕಾರ್ಪೊರೇಟರ್ ವ್ಯವಹಾರಗಳ ಸಚಿವಾಲಯದಲ್ಲಿ ಇವರ ಕಂಪೆನಿ ನೋಂದಣಿಯಾಗಿದೆ. ಕಳೆದ ಜುಲೈಯಲ್ಲಿ ಊಟದಲ್ಲಿ ಜಿರಳೆ ಇದೆ ಎಂದು ಜೆಟ್ ಏರ್‌ವೇಸ್‌ನಲ್ಲಿ ರಾದ್ದಾಂತ ಮಾಡಿದ್ದರು. ಸಲ್ಲಾ ಅವರಿಗೆ ಮಾನಸಿಕ ಸಮಸ್ಯೆ ಇರುವ ಸಾಧ್ಯತೆ ಇದೆ ಎಂದು ತನಿಖೆ ನಡೆಸಿದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸಲ್ಲಾ ಅವರ ಹಿನ್ನೆಲೆ ಪರಿಶೀಲಿಸಿ ಹಾಗೂ ಅವರು ನೀಡಿದ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ವಿಚಾರ ಬಹಿರಂಗಪಡಿಸಿದ್ದಾರೆ.
ಜೆಟ್ ಏರ್‌ವೇಸ್ ವಿಮಾನ ಹಾರಾಟವನ್ನು ಅಸ್ಥಿರಗೊಳಿಸಲು ತಾನು ಈ ಬೆದರಿಕೆ ಪತ್ರ ಇರಿಸಿದೆ ಎಂದು ಸಲ್ಲಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಾಂತಿ ಮಾರ್ಗದ ಶ್ರೀಪತಿ ಆರ್ಕೇಡ್‌ನ ನಿವಾಸಿಯಾಗಿರುವ ಸಲ್ಲಾ ಈಗ ಅಹ್ಮದಾಬಾದ್ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಪ್ರಯಾಣ ನಿಷೇಧ ಪಟ್ಟಿಯಲ್ಲಿ ಇವರು ಮೊದಲಿಗರಾಗುವ ಸಾಧ್ಯತೆ ಇದೆ.