×
Ad

ಎನ್‌ಟಿಎಸ್‌ಇ-ಹಂತ 2ರಲ್ಲಿ ಒಬಿಸಿ ಕೋಟಾಕ್ಕೆ ಒಪ್ಪಿಗೆ: ಜಾವಡೇಕರ್

Update: 2017-10-31 20:11 IST

ಹೊಸದಿಲ್ಲಿ,ಅ.31: ಎನ್‌ಸಿಇಆರ್‌ಟಿಯು ನಡೆಸುವ ಎರಡನೇ ಹಂತದ ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆ(ಎನ್‌ಟಿಎಸ್‌ಇ)ಗೆ ಒಬಿಸಿ ವಿದ್ಯಾರ್ಥಿಗಳ ಮೀಸಲಾತಿಗೆ ಒಪ್ಪಿಗೆ ನೀಡಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಮಂಗಳವಾರ ತಿಳಿಸಿದರು.

2018ನೇ ಸಾಲಿನ ಪರೀಕ್ಷೆಗಳು ಈಗಾಗಲೇ ಆರಂಭಗೊಂಡಿರುವುದರಿಂದ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ.27ರಷ್ಟು ಮೀಸಲಾತಿಯು 2019ನೇ ಸಾಲಿನಿಂದ ಅನ್ವಯಗೊಳ್ಳಲಿದೆ. ಇದು ಈಗಾಗಲೇ ಇರುವ ಎಸ್‌ಸಿ(ಶೇ.15), ಎಸ್‌ಟಿ (ಶೇ.7.5) ಮತ್ತು ಅಂಗವಿಕಲ ವಿದ್ಯಾರ್ಥಿಗಳ ಕೋಟಾ(ಶೇ.4)ಕ್ಕೆ ಅತಿರಿಕ್ತವಾಗಿರಲಿದೆ ಎಂದರು.

ಎರಡನೇ ಹಂತದ ಎನ್‌ಟಿಎಸ್‌ಇಗಾಗಿ ವಿದ್ಯಾರ್ಥಿ ವೇತನಗಳ ಸಂಖ್ಯೆಯನ್ನು 1,000ದಿಂದ 2,000ಕ್ಕೆ ಹೆಚ್ಚಿಸುವ ಪ್ರಸ್ತಾವವು ಸರಕಾರದ ಪರಿಶೀಲನೆಯಲ್ಲಿದೆ ಎಂದೂ ಅವರು ಹೇಳಿದರು.

 ಯೋಜನೆಯಡಿ 11 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳು ಮಾಸಿಕ 1,250 ರೂ. ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು 2,000 ರೂ.ವಿದ್ಯಾರ್ಥಿ ವೇತನಗಳನ್ನು ಪಡೆಯಲಿದ್ದಾರೆ. ಪಿಎಚ್‌ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಯುಜಿಸಿ ನಿಯಮಾವಳಿಯಂತೆ ನಿರ್ಧರಿಸಲಾಗುವುದು ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಹಂತ-1ರ ಪರೀಕ್ಷೆಯನ್ನು ರಾಜ್ಯ ಸರಕಾರಗಳು ಮತ್ತು ಹಂತ-2ರ ಪರೀಕ್ಷೆಯನ್ನು ಎನ್‌ಸಿಇಆರ್‌ಟಿ ನಡೆಸುತ್ತವೆ.

 ಒಬಿಸಿ ವರ್ಗಗಳಿಗೆ ಮೀಸಲಾತಿಯನ್ನು ಒದಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಬಹುದು ಎಂದು ಮೂಲಗಳು ತಿಳಿಸಿದವು. ಕೆಲವು ರಾಜ್ಯಗಳು ಈಗಾಗಲೇ ಒಬಿಸಿಗಳಿಗೆ ಮೀಸಲಾತಿಯನ್ನು ಒದಗಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News