ವ್ಯಾಪಂ ಹಗರಣ: ಮಧ್ಯಪ್ರದೇಶ ಸಿಎಂ ಬಚಾವ್

Update: 2017-11-01 04:18 GMT

ಭೋಪಾಲ್, ನ.1: ಬಹುಕೋಟಿ ವ್ಯಾಪಂ ಹಗರಣದ ಬಗ್ಗೆ ತನಿಖೆ ನಡೆಸಿದ ಸಿಬಿಐ 490 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಆದರೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದರಿಂದ ಅವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳು ಮಾಡಿದ್ದ ಹಾಗೂ ಹಲವು ಜೀವಗಳನ್ನು ಬಲಿ ಪಡೆದಿದ್ದ ಈ ಹಗರಣ ನಾಲ್ಕು ವರ್ಷಗಳಿಂದ ಕಗ್ಗಂಟಾಗಿತ್ತು.
ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಮತ್ತು ಪ್ರಕರಣ ಬಯಲಿಗೆಳೆದ ಪ್ರಶಾಂತ್ ಪಾಂಡೆ ಆರೋಪಿಸಿದಂತೆ ಸಿಬಿಐ ವಶಪಡಿಸಿಕೊಂಡ ಹಾರ್ಡ್‌ಡಿಸ್ಕ್‌ನಲ್ಲಿ ಮುಖ್ಯಮಂತ್ರಿ ಎಂಬ ಪದದ ಉಲ್ಲೇಖ ಎಲ್ಲೂ ಇಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಲಾಗಿದೆ. ಈ ಡಿಸ್ಕ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

"ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸಾಧನವನ್ನು ತಿರುಚಿದ ಯಾವ ಅಂಶವನ್ನೂ ವಿಧಿವಿಜ್ಞಾನ ತಜ್ಞರು ಉಲ್ಲೇಖಿಸಿಲ್ಲ ಎನ್ನುವುದನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದೇವೆ" ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಸ್ಪಷ್ಟಪಡಿಸಿದ್ದಾರೆ.

2013ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆಪಾದಿಸಲಾಗಿತ್ತು. ದೊಡ್ಡ ಪ್ರಮಾಣದ ಹಣವನ್ನು ಲಂಚ ಪಡೆದು, ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನೇ ತಿದ್ದಿ, ಅಕ್ರಮವಾಗಿ ಪ್ರವೇಶ ನೀಡಲಾಗಿದೆ ಎನ್ನುವುದು ಆರೋಪ.

ಆರೋಪಟ್ಟಿಯಲ್ಲಿ ಮೂವರು ವ್ಯಾಪಂ ಅಧಿಕಾರಿಗಳು, ಮೂವರು ದಂಧೆಕೋರರು, 17 ದಲ್ಲಾಳಿಗಳು, 297 ಮಂದಿ ನಕಲಿ ಅಭ್ಯರ್ಥಿಗಳು ಮತ್ತು ಫಲಾನುಭವಿ ಅಭ್ಯರ್ಥಿಗಳು, 170 ಮಂದಿ ಪೋಷಕರನ್ನು ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News