ರಾಹುಲ್ ದೃಷ್ಟಿಯಲ್ಲಿ 'ನಾಯಿ' ಮತ್ತು 'ಪಕ್ಷದ ಕಾರ್ಯಕರ್ತ' ಸಮಾನರು ಎಂದ ಹರ್ಯಾಣದ ಸಚಿವ ವಿಜ್
ಚಂಡಿಗಡ,ನ.1: ತನ್ನ ಇತ್ತೀಚಿನ ತಮಾಷೆಯ ಟ್ವಿಟರ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಒಂದು ಸಾಲಿನ ಹೇಳಿಕೆಗಳ ಹಿಂದೆ ತನ್ನ ಮುದ್ದಿನ ನಾಯಿ ‘ಪಿಡಿ’ಯ ಕೈವಾಡವಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದಾಗಿನಿಂದ ಈ ನಾಯಿ ಎಲ್ಲರ ಗಮನವನ್ನು ಸೆಳೆದಿದೆ.
ಆದರೆ ಹರ್ಯಾಣದ ಆರೋಗ್ಯ ಸಚಿವ ಅನಿಲ ವಿಜ್ ಅವರು ಬುಧವಾರ ಈ ತಮಾಷೆಯ ವಿಷಯವನ್ನು ಬೇರೊಂದು ಮಟ್ಟಕ್ಕೊಯ್ದಿದ್ದಾರೆ. ರಾಹುಲ್ ತನಗೆ ಊಟ ನೀಡಿದ್ದ ತಟ್ಟೆಯಲ್ಲಿಯೇ ತನ್ನ ನಾಯಿಗೂ ಊಟ ನೀಡಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತನೋರ್ವ ಹೇಳಿರುವುದಾಗಿ ಅವರು ಟ್ವೀಟಿಸಿದ್ದಾರೆ.
ರಾಹುಲ್ ಅವರು ನಾಯಿಗಳು ಮತ್ತು ಪಕ್ಷದ ಕಾರ್ಯಕರ್ತರನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತಿರುವುದು ತುಂಬ ಒಳ್ಳೆಯ ವಿಷಯ ಎಂದು ಇನ್ನೊಂದು ಟ್ವೀಟ್‌ನಲ್ಲಿ ಅವರು ಛೇಡಿಸಿದ್ದಾರೆ.
ವಿವಾದಗಳು ವಿಜ್‌ಗೆ ಹೊಸದೇನಲ್ಲ. ಕಾಂಗ್ರೆಸಿಗರೆಲ್ಲ ಬ್ರಿಟಿಷರ ಸಂತಾನಗಳು ಎಂದು ಅವರು ಕಳೆದ ವರ್ಷ ವಿಧಾನಸಭೆಯಲ್ಲಿ ಹೇಳಿದ್ದರು.
ವಿಜ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ತಿರುಗೇಟು ನೀಡಿದೆ. ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರು ತಕ್ಷಣವೇ ವಿಜ್ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಒಳ್ಳೆಯ ವೈದ್ಯರ ಅಗತ್ಯವಿದೆ. ಇಂತಹ ವ್ಯಕ್ತಿಯನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಕುಲದೀಪ್ ಶರ್ಮಾ ಹೇಳಿದ್ದಾರೆ.