ಅಮೆರಿಕ, ಇಂಗ್ಲೆಂಡ್‌ಗಿಂತ ಮಧ್ಯಪ್ರದೇಶ ಸಾವಿರಪಟ್ಟು ಉತ್ತಮ: ಶಿವರಾಜ್ ಸಿಂಗ್ ಚೌಹಾಣ್

Update: 2017-11-02 16:01 GMT

ಇಂದೋರ್, ನ.2: ಮಧ್ಯಪ್ರದೇಶ ರಾಜ್ಯದ ರಸ್ತೆಗಳು ಅಮೆರಿಕ ದೇಶದ ರಸ್ತೆಗಿಂತ ಉತ್ತಮವಾಗಿವೆ ಎಂದು ಈ ಹಿಂದೆ ಹೇಳಿಕೆ ನೀಡಿ ಭಾರೀ ಟೀಕೆ ಎದುರಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಗಿಂತ ಮಧ್ಯಪ್ರದೇಶ ರಾಜ್ಯ ಅದೆಷ್ಟೋ ಉತ್ತಮವಾಗಿದೆ ಎಂದು ಮತ್ತೊಂದು ಹೇಳಿಕೆ ನೀಡಿದ್ದಾರೆ.

ಇಂಗ್ಲೆಂಡ್,ಅಮೆರಿಕ ಸೇರಿದಂತೆ ಹಲವು ದೇಶಗಳಿಗಿಂತ ಮಧ್ಯಪ್ರದೇಶ ಸಾವಿರಪಟ್ಟು ಉತ್ತಮವಾಗಿದೆ. ಆದರೆ ಇದನ್ನು ಅರಿಯಲು ಸಕಾರಾತ್ಮಕ ಚಿಂತನೆಯ ಅಗತ್ಯವಿದೆ. ನಮ್ಮ ದೇಶದ ಬಗ್ಗೆ ಹೆಮ್ಮೆಯ ಭಾವ ಇರಬೇಕು. ಗುಲಾಮಗಿರಿಯ ಮನಸ್ಥಿತಿ ಹೊಂದಿರುವ ಜನರು ಯಾವಾಗಲೂ ತಮ್ಮ ದೇಶಕ್ಕಿಂತ ಇತರ ದೇಶಗಳು ಉತ್ತಮವಾಗಿವೆ ಎಂದು ಭಾವಿಸುತ್ತಾರೆ ಎಂದು ಚೌಹಾಣ್ ಹೇಳಿದರು.

ಮಧ್ಯಪ್ರದೇಶ ರಾಜ್ಯದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಎರಡಂಕೆಯ ಅಭಿವೃದ್ಧಿ ದರವನ್ನು ಸಾಧಿಸಿರುವ ಮಧ್ಯಪ್ರದೇಶ ಅತ್ಯಂತ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯವನ್ನು ಭ್ರಷ್ಟಾಚಾರ ಮುಕ್ತ, ಬಡತನ ಮುಕ್ತ ಹಾಗೂ ಭಯೋತ್ಪಾದನೆ ಮುಕ್ತಗೊಳಿಸಿ, ಮಧ್ಯಪ್ರದೇಶವನ್ನು ವಿಶ್ವದ ಅತ್ಯುತ್ತಮ ರಾಜ್ಯವನ್ನಾಗಿ ರೂಪಿಸಲು ರಾಜ್ಯದ 7.50 ಕೋಟಿ ಜನತೆ ಕಂಕಣಬದ್ಧರಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News