ನನ್ನ ಪುತ್ರಿ ಮುಸ್ಲಿಮಳಾಗಿ ಬದುಕುವುದಕ್ಕೆ ವಿರೋಧವಿಲ್ಲ: ಹಾದಿಯಾ ತಂದೆ ಅಶೋಕನ್
ಕೋಟ್ಟಯಂ, ನ.3: "ನನ್ನ ಪುತ್ರಿ ಮುಸ್ಲಿಮಳಾಗಿ ಬದುಕುವುದರಲ್ಲಿ ನನಗೆ ವಿರೋಧವಿಲ್ಲ. ಆದರೆ ಶಫಿನ್ ಜಹಾನ್‍ನೊಂದಿಗೆ ಆದ ಮದುವೆಯನ್ನು ಒಪ್ಪಲಾರೆ" ಎಂದು ಹಾದಿಯಾಳ ತಂದೆ ಅಶೋಕನ್ ಹೇಳಿದ್ದಾರೆ ಎಂದು 'ಮಾಧ್ಯಮಂ ಡಾಟ್ ಕಾಂ' ವರದಿ ಮಾಡಿದೆ.
"ಶಫಿನ್ ಜಹಾನ್ ಭಯೋತ್ಪಾದಕರೊಂದಿಗೆ ಸಂಬಂಧವಿರುವ ವ್ಯಕ್ತಿ. ಮುಸ್ಲಿಮಳಾಗಿ ಆಕೆಗೆ ನನ್ನ ಮನೆಯಲ್ಲಿ ಜೀವಿಸಬಹುದು. ಇಸ್ಲಾಂ ಧರ್ಮಕ್ಕೆ ಸೇರಿದ ಬೇರೊಬ್ಬನನ್ನು ಮದುವೆ ಆಗುವುದಕ್ಕೂ ಅಡ್ಡಿಯಿಲ್ಲ. ಆದರೆ ಶಫಿನ್ ಜಹಾನ್ ಗೆ ಭಯೋತ್ಪಾದಕರೊಂದಿಗೆ ಸಂಬಂಧ ಇದೆ ಎನ್ನುವ ಕುರಿತು ನನ್ನ ಬಳಿ ಪುರಾವೆಯಿದೆ. ಅದನ್ನು ಕೋರ್ಟಿಗೆ ಸಲ್ಲಿಸುತ್ತೇನೆ. ನನಗೆ ಸೂಚಿದಂತೆ ಹಾದಿಯಾಳನ್ನು ಸುಪ್ರೀಂಕೋರ್ಟಿನಲ್ಲಿ ಹಾಜರುಪಡಿಸುವೆ" ಎಂದು ಅಶೋಕನ್ ಹೇಳಿದರು ಎನ್ನಲಾಗಿದೆ.
ಈ ಹಿಂದೆ ರಾಹುಲ್ ಈಶ್ವರ್ ಹೊರಬಿಟ್ಟ ವಿಡಿಯೋದ ಕುರಿತು ವಿವರಿಸಿದ ಅಶೋಕನ್, "ರಾಹುಲ್ ಈಶ್ವರ್ ಹಾದಿಯಾಳ ಕೌನ್ಸೆಲಿಂಗ್ ಮಾಡಲು ಬಂದಿದ್ದೇನೆ ಎಂದು ಹೇಳಿದ್ದರು. ವಿಡಿಯೋದಲ್ಲಿರುವ ದೃಶ್ಯಗಳು ಅವಳಲ್ಲಿ ಹೇಳಿಸಿದ್ದಾಗಿರಬಹುದು. ನನ್ನ ಮಗಳಿಗೆ ಹೊರಗೆ ಹೋಗುವುದಕ್ಕಾಗಲಿ, ಬೇರೆಯವರೊಡನೆ ಮಾತನಾಡುವುದಕ್ಕಾಗಲಿ ಯಾವುದೇ ನಿಷೇಧ ಇಲ್ಲ. ಪೊಲೀಸರ ಜೊತೆ ಹೊರಗೆ ಹೋಗಬಹುದು. ಇತರರೊಂದಿಗೆಮಾತಾಡಬಹುದು" ಎಂದು ಅಶೋಕನ್ ಹೇಳಿದರು.