ಆಧಾರ್ ಸೇವೆಯನ್ನೊದಗಿಸಲು ಅನುಕೂಲಗಳಿಲ್ಲ: ಬ್ಯಾಂಕರ್‌ಗಳಿಂದ ಅಹವಾಲು ಸಲ್ಲಿಕೆ

Update: 2017-11-04 12:55 GMT

ಮುಂಬೈ,ನ.4: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಆದೇಶಿಸಿರುವಂತೆ ಶೇ.10ರಷ್ಟು ಬ್ಯಾಂಕ್ ಶಾಖೆಗಳಲ್ಲಿ ಆಧಾರ್ ಸಂಬಂಧಿತ ಸೇವೆಗಳನ್ನೊದಗಿಸಲು ತಮ್ಮ ಬಳಿ ಅನುಕೂಲಗಳಿಲ್ಲವೆಂದು ಬ್ಯಾಂಕ್ ನೌಕರರು ಸರ್ವೋಚ್ಚ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಥಾಮಸ್ ಫ್ರಾಂಕೋ ಅವರು, ಒಕ್ಕೂಟವು ಆಧಾರ್ ಕಾರ್ಡ್‌ನಲ್ಲಿಯ ಖಾಸಗಿತನ ಮತ್ತು ಭದ್ರತಾ ವೈಶಿಷ್ಟಗಳ ಕೊರತೆಯನ್ನು ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದೆ. ನಿಯಮಗಳು ಯಾರೇ ವಂಚನೆಯನ್ನು ಮಾಡಿದರೂ ಬ್ಯಾಂಕ್ ಅಧಿಕಾರಿಯನ್ನು ಹೊಣೆಯಾಗಿಸುತ್ತವೆ. ಬ್ಯಾಂಕ್ ಅಧಿಕಾರಿಗಳು ನಕಲಿ ಕಾರ್ಡ್‌ಗಳನ್ನು ಗುರುತಿಸುವ ಸ್ಥಿತಿಯಲ್ಲಿಲ್ಲ. ಮಾಹಿತಿಗಳನ್ನು ಸಂಗ್ರಹಿಸುತ್ತಿರುವ 49,000 ಆಧಾರ್ ನೋಂದಣಿ ಕೇಂದ್ರಗಳು ಕಪ್ಪುಪಟ್ಟಿಗೆ ಸೇರಿರುವಾಗ ಬ್ಯಾಂಕ್ ನೌಕರರನ್ನು ಹೊಣೆಯಾಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

 ಬ್ಯಾಂಕುಗಳು ತಮ್ಮ ಶೇ.10ರಷ್ಟು ಶಾಖೆಗಳಲ್ಲಿ ಆಧಾರ್ ಕೇಂದ್ರಗಳನ್ನು ಹೊಂದಿರಬೇಕೆಂದು ಯುಐಡಿಎಐ ಸೂಚಿಸಿದ್ದರೆ, ಆಧಾರ್ ಸಂಬಂಧಿತ ಕೆಲಸಗಳನ್ನು ಮಾಡಲು ಒಂದು ಲಕ್ಷಕ್ಕೂ ಅಧಿಕ ಸಿಬ್ಬಂದಿಗಳು ಬೇಕಾಗುತ್ತಾರೆ ಎನ್ನುವುದು ಬ್ಯಾಂಕರ್‌ಗಳ ವಾದವಾಗಿದೆ.

ಜನಧನ ಖಾತೆಗಳ ಆರಂಭ, ನೋಟು ನಿಷೇಧ, ಅಟಲ್ ಪಿಂಚಣಿ ಯೋಜನೆ ಮತ್ತು ಇತರ ಸರಕಾರಿ ವಿಮಾ ಯೋಜನೆಗಳಿಗಾಗಿ ಬ್ಯಾಂಕುಗಳು ಮಾಡಿರುವ ಹೆಚ್ಚುವರಿ ಕೆಲಸಗಳಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ತಿಳಿಸಿದ ಫ್ರಾಂಕೋ, ಬ್ಯಾಂಕುಗಳು ಸಾಮೂಹಿಕ ಎಸ್‌ಎಂಎಸ್‌ಗಳನ್ನು ಕಳುಹಿಸಬಾರದು ಮತ್ತು ಗ್ರಾಹಕರಿಗೆ ಕರೆಗಳನ್ನು ಮಾಡಿ ವಿವರಿಸಬೇಕು ಎಂದು ಸರಕಾರದ ವಕ್ತಾರರು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಾರೆ. ಆದರೆ 80 ಕೋಟಿ ಖಾತೆದಾರರಿಗೆ ವ್ಯಕ್ತಿಗತವಾಗಿ ಕರೆಗಳನ್ನು ಮಾಡಲು ಅಗತ್ಯ ಸಂಪನ್ಮೂಲ ಬ್ಯಾಂಕುಗಳ ಬಳಿ ಇಲ್ಲ ಎಂದರು.

ಬ್ಯಾಂಕ ರಾಷ್ಟ್ರೀಕರಣ ಕಾಯ್ದೆಯಡಿ ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ ನೌಕರರ ಪ್ರತಿನಿಧಿಗಳು ಇರುವುದು ಅಗತ್ಯವಾಗಿದ್ದರೂ ಸರಕಾರವು ಅವರ ನೇಮಕಗಳನ್ನು ವಿಳಂಬಿಸುತ್ತಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News