ಮಿತ್ರನ ಪತ್ನಿಯನ್ನು ಜೀವಂತ ಸುಟ್ಟ ದುಷ್ಕರ್ಮಿಗಳು
ಪಾಟ್ನಾ, ನ.4: ಪಾನನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ, ಸಾರಾಯಿ ಖರೀದಿಸಲು ಹಣ ನೀಡಲು ನಿರಾಕರಿಸಿದ ಮಿತ್ರನ ಪತ್ನಿಯನ್ನು ಇಬ್ಬರು ವ್ಯಕ್ತಿಗಳು ಸೇರಿ ಜೀವಂತವಾಗಿ ದಹಿಸಿದ ಘಟನೆ ನಡೆದಿದೆ.
ಪಾಟ್ನಾ ನಗರದ 110 ಕಿ.ಮೀ. ದೂರವಿರುವ ಶಿವನಗರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾಜೀವ್ ಮಿಶ್ರಾ ಎಂಬಾತನ ಸ್ನೇಹಿತರಾದ ಬಿಎಸ್ ಗಿರಿ ಹಾಗೂ ಅಮಿತ್ ಗಿರಿ ಎಂಬವರು ಶುಕ್ರವಾರ ರಾಜೀವ್ ಮನೆಗೆ ಬಂದು ಸಾರಾಯಿ ಖರೀದಿಸಲು ಆತನಲ್ಲಿ ಹಣ ಕೇಳಿದ್ದಾರೆ. ಆದರೆ ರಾಜೀವ್ ಹಣ ನೀಡಲು ನಿರಾಕರಿಸಿದ್ದ. ಸಂಜೆ ವೇಳೆ, ರಾಜೀವ್ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಮತ್ತೆ ಬಂದ ಅವರಿಬ್ಬರು ರಾಜೀವನ ಪತ್ನಿ ಅಲ್ಕಾ ಮಿಶ್ರಾ ಎಂಬಾಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ರಾಜೀವ್ ಮನೆಗೆ ಬಂದಿದ್ದು ಬೆಂಕಿಯ ಜ್ವಾಲೆಯ ಮಧ್ಯೆ ಹೊರಳಾಡುತ್ತಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಶೇ.90ರಷ್ಟು ಸುಟ್ಟಗಾಯವಾಗಿದ್ದ ಅಲ್ಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮುಝಾಫರ್‌ಪುರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಲ್ಕಾ ಮಿಶ್ರಾ ನೀಡಿರುವ ಹೇಳಿಕೆಯಲ್ಲಿ , ತನ್ನ ಪತಿಯ ಮಿತ್ರರಾದ ಬಿಎಸ್ ಗಿರಿ ಹಾಗೂ ಅಮಿತ್ ಗಿರಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಗಿ ತಿಳಿಸಿದ್ದು ಇದರಂತೆ ಪ್ರಕರಣ ದಾಖಲಿಸಲಾಗಿದೆ.