×
Ad

ತಮಿಳುನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ

Update: 2017-11-04 20:21 IST

ಚೆನ್ನೈ, ನ.4: ತಮಿಳುನಾಡಿನಲ್ಲಿ 2015ರಲ್ಲಿ ಸಂಭವಿಸಿದ ಜಲಪ್ರಳಯ ಮರುಕಳಿಸುವ ಭೀತಿ ಹುಟ್ಟಿಸಿರುವ ಮಳೆಯ ಅಬ್ಬರ ರಾಜ್ಯದ ವಿವಿಧೆಡೆ ಮುಂದುವರಿದಿದ್ದು, ಚೆನ್ನೈಯಲ್ಲಿ ಸತತ ಆರನೇ ದಿನ ಮಳೆ ಸುರಿದಿದೆ. ಈ ಮಧ್ಯೆ, ಮುಂದಿನ ಕೆಲ ದಿನ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 ಮಳೆಯ ಕಾರಣ ಚೆನ್ನೈ ಹಾಗೂ ಇತರ ಕೆಲವೆಡೆ ಶಾಲಾ ಕಾಲೇಜುಗಳು ಹಾಗೂ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈಯಲ್ಲಿ ಶುಕ್ರವಾರ ರಾತ್ರಿ ಮಳೆಯ ಅಬ್ಬರ ಕಡಿಮೆಯಾದ ಕಾರಣ ಶನಿವಾರ ಬೆಳಗ್ಗಿನ ವೇಳೆ ನಗರ ಸಹಜ ಸ್ಥಿತಿಯತ್ತ ಮರಳುವ ಸೂಚನೆಯಿತ್ತು. ಆದರೆ ಬಳಿಕ ನಗರದ ಹಲವೆಡೆ ಮಳೆ ಮತ್ತೆ ಬಿರುಸುಗೊಂಡಿದೆ. ಬಂಗಾಳಕೊಲ್ಲಿಯಲ್ಲಿ ನಿಮ್ನ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಕಾರಣ ಸೋಮವಾರದವರೆಗೆ ತಮಿಳುನಾಡಿನ ಕರಾವಳಿ ಪ್ರದೇಶ ಹಾಗೂ ಪುದುಚೇರಿಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.

  ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಕಾರಣ ಬಸ್ಸು ಹಾಗೂ ರೈಲುಗಳ ಸಂಚಾರ ವಿಳಂಬವಾಗಿ ಜನರಿಗೆ ತೊಂದರೆಯಾಯಿತು. ಅಕ್ಟೋಬರ್ 31ರಿಂದ ಮುಚ್ಚಲ್ಪಟ್ಟಿರುವ ಶಾಲಾ ಕಾಲೇಜುಗಳ ರಜೆಯನ್ನು ವಿಸ್ತರಿಸಲಾಗಿದೆ. ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳ ಪರೀಕ್ಷೆಯನ್ನು ಮುಂದೂಡಲಾಗಿದೆ. ಶನಿವಾರ (ನ.4) ನಿಗದಿಯಾಗಿದ್ದ ರಾಜ್ಯಮಟ್ಟದ ರಾಷ್ಟ್ರೀಯ ಪ್ರತಿಭಾ ಶೋಧ ಪರೀಕ್ಷೆಯನ್ನು ನ.18ಕ್ಕೆ ಮುಂದೂಡಲಾಗಿದೆ.

  ನಗರಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಮುಂಜಾಗರೂಕತಾ ಕ್ರಮವಾಗಿ ಚೆನ್ನೈ ನಗರದ ಉತ್ತರ ಭಾಗದ ಪ್ರದೇಶಗಳು, ದಕ್ಷಿಣ ಚೆನ್ನೈಯ ಮಡಿಪಕ್ಕಮ್, ಪಶ್ಚಿಮ ಚೆನ್ನೈಯ ಕರಪಕ್ಕಮ್ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಚೆನ್ನೈ ನಗರದ ನನ್‌ಮಂಗಲಮ್ ಹಾಗೂ ಪಳ್ಳಿಕರಣೈ ಪಟ್ಟಣದಲ್ಲಿ ಸ್ವಯಂಸೇವಕರು ನೆರೆಬಾಧಿತ ಪ್ರದೇಶದ ಜನರಿಗೆ ಆಹಾರ ಮತ್ತು ನೀರಿನ ಪೊಟ್ಟಣವನ್ನು ವಿತರಿಸಿದರು. ಶುಕ್ರವಾರ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ನಗರದ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಸಮಸ್ಯೆಯ ಪರಿಹಾರಕ್ಕೆ ಸರಕಾರ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಹಾಗೂ ಇತರ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಯ ಜೊತೆಗಿದ್ದರು.

     ತಮಿಳುನಾಡು ಹಾಗೂ ನೆರೆಯ ಪುದುಚೇರಿ ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು ಚೆನ್ನೈ ನಗರದಲ್ಲಿ ಕಳೆದ 24 ಗಂಟೆಯಲ್ಲಿ 65.8 ಎಂಎಂ ಮಳೆ ದಾಖಲಾಗಿದೆ. ಮೀನಂಬಾಕ್ಕಂನಲ್ಲಿ 62 ಎಂಎಂ ಮಳೆ ದಾಖಲಾಗಿದೆ . ಕರಾವಳಿ ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ನಾಗಪಟ್ಟಿಣಂನಲ್ಲಿ 2 ಸೆಂಟಿಮೀಟರ್ ಮಳೆ ದಾಖಲಾಗಿದ್ದರೆ ಕಾರೈಕಲ್ ಮತ್ತು ಪುದುಚೇರಿಯಲ್ಲಿ 1 ಸೆಂಟಿಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 ರೈಲ್ವೇ ಸೇವೆಗೆ ತೊಂದರೆ: ಮುಸಲಧಾರೆಯಾಗಿ ಸುರಿದ ಮಳೆಯ ಕಾರಣ ಚೆನ್ನೈ ವಲಯದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು ಸರ್ಕ್ಯೂಟ್ ಆಧಾರಿತ ಸಿಗ್ನಲ್ ವ್ಯವಸ್ಥೆಗೆ ತೊಂದರೆಯಾಗಿದೆ. ಈ ಕಾರಣ ಕೋಡಂಬಾಕ್ಕಮ್- ಸೈಂಟ್ ಥೋಮಸ್ ವೌಂಟ್ ಸ್ಟೇಷನ್ ನಡುವಿನ ರೈಲು ಸಂಚಾರಕ್ಕೆ ತೊಂದರೆಯಾಗಿತ್ತು. ಬಳಿಕ ಈ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ರೈಲ್ವೇ ಮಂಡಳಿಯ ಪ್ರಕಟಣೆ ತಿಳಿಸಿದೆ.

   ಇದೇ ಸಮಸ್ಯೆ ಉತ್ತರದ ತೊಂದಿಯಾರ್‌ಪೇಟೆ ಮತ್ತು ಕೊರುಕ್ಕುಪೇಟೆ ಮಾರ್ಗದಲ್ಲಿ ಗೋಚರಿಸಿದ್ದು ಬಳಿಕ ಸರಿಪಡಿಸಲಾಗಿದೆ. ಸ್ವಯಂಚಾಲಿತ ಸಿಗ್ನಲ್ ವ್ಯವಸ್ಥೆ ಬಾಧಿತವಾದ ಪ್ರದೇಶದಲ್ಲಿ ರೈಲುಗಳು ನಿಧಾನಗತಿಯಲ್ಲಿ ಸಂಚರಿಸುತ್ತಿರುವ ಕಾರಣ ರೈಲು ಸಂಚಾರದಲ್ಲಿ ವಿಳಂಬವಾಗಿದೆ ಎಂದು ರೈಲ್ವೈ ಮಂಡಳಿ ಮಾಹಿತಿ ನೀಡಿದೆ. ಕೆಲವು ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಾಗ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ತಕ್ಷಣ ಸಮೀಪದ ರೈಲ್ವೇ ನಿಲ್ದಾಣದಿಂದ ಬದಲಿ ವಿದ್ಯುತ್ ವ್ಯವಸ್ಥೆಗೊಳಿಸಿ ರೈಲು ಸಂಚಾರ ಸುಗಮಗೊಳಿಸಲಾಗಿದೆ . ಸೈಂಟ್ ಥಾಮಸ್ ವೌಂಟ್ - ಪಲ್ಲವರಂ ನಿಲ್ದಾಣದ ಮಧ್ಯೆ ಹಳಿಯಲ್ಲಿ ಉಂಟಾಗಿದ್ದ ಬಿರುಕನ್ನು ಸಕಾಲದಲ್ಲಿ ಪತ್ತೆಹಚ್ಚಿ ಸರಿಪಡಿಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News