ಶಹಝಾದಾನ ಯಶಸ್ಸಿನ ಬಳಿಕ ಬಿಜೆಪಿಯ ಹೊಸ ಕೊಡುಗೆ 'ಅಜಿತ್ ಶೌರ್ಯ ಕಥೆ': ರಾಹುಲ್ ವ್ಯಂಗ್ಯ
ಹೊಸದಿಲ್ಲಿ,ನ.4: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ಶೌರ್ಯ ಅವರು ಕೆಲವು ಕೇಂದ್ರ ಸಚಿವರು ಆಡಳಿತ ಮಂಡಳಿಯ ಸದಸ್ಯರಾಗಿರುವ ಚಿಂತನ ಚಾವಡಿ ‘ಇಂಡಿಯಾ ಫೌಂಡೇಷನ್’ಅನ್ನು ನಡೆಸುತ್ತಿರುವುದರಲ್ಲಿ ‘ಹಿತಾಸಕ್ತಿಗಳ ಸಂಘರ್ಷದ ಸಾಧ್ಯತೆಯಿದೆ’ ಎಂದು ಆರೋಪಿಸಿರುವ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಶನಿವಾರ ಬಿಜೆಪಿಯ ವಿರುದ್ಧ ದಾಳಿ ನಡೆಸಿದೆ.
‘ಶಹಝಾದಾನ ಅಪಾರ ಯಶಸ್ಸಿನ ಬಳಿಕ ಬಿಜೆಪಿಯ ಹೊಸ ಕೊಡುಗೆ. ಅಜಿತ ಶೌರ್ಯ ಕಥೆ ’ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟಿಸಿದ್ದಾರೆ.
ಶೌರ್ಯ ದೋವಲ್ ಅವರು ಹಣಕಾಸು ಸೇವೆಗಳನ್ನೊದಗಿಸುವ ಜೆಮಿನಿ ಫೈನಾನ್ಶಿಯಲ್ ಸರ್ವಿಸಿಸ್‌ನ ಪಾಲುದಾರರಾಗಿದ್ದಾರೆ ಮತ್ತು ಈ ಸಂಸ್ಥೆಯು ಆರ್ಗನೈಸೇಷನ್ ಆಫ್ ಇಕನಾಮಿಕ್ ಕಾರ್ಪೊರೇಷನ್ ಆ್ಯಂಡ್ ಡೆವಲಪ್‌ಮೆಂಟ್ (ಒಇಸಿಡಿ) ಮತ್ತು ಉದಯೋನ್ಮುಖ ಏಷ್ಯನ್ ಆರ್ಥಿಕತೆಗಳ ನಡುವೆ ವಹಿವಾಟುಗಳು ಮತ್ತು ಬಂಡವಾಳ ಹರಿವಿನ ಕೊಂಡಿಯಾಗಿದೆ. ಶೌರ್ಯ ದೇವಲ್ ಇಂಡಿಯಾ ಫೌಂಡೇಷನ್ ಅನ್ನೂ ನಡೆಸುತ್ತಿದ್ದಾರೆ. ಕೆಲವು ಹಿರಿಯ ಸದಸ್ಯರು ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಮತ್ತು ಅದು ತನ್ನ ಚಟುವಟಿಕೆಗಳಿಗಾಗಿ ವಿದೇಶಿ ಮತ್ತು ಭಾರತೀಯ ಕಾರ್ಪೊರೇಟ್‌ಗಳ ಆರ್ಥಿಕ ನೆರವನ್ನು ನೆಚ್ಚಿಕೊಂಡಿದೆ ಮತ್ತು ಈ ಕಾರ್ಪೊರೇಟ್‌ಗಳ ಪೈಕಿ ಕೆಲವರು ಸರಕಾರದೊಡನೆ ವಹಿವಾಟುಗಳನ್ನು ಹೊಂದಿದ್ದಾರೆ. ಹೀಗಾಗಿ ಶೌರ್ಯ ಅವರು ಇಂಡಿಯಾ ಫೌಂಡೇಷನ್ ನಡೆಸುವುದರಲ್ಲಿ ಹಿತಾಸಕ್ತಿಗಳ ಸಂಘರ್ಷದ ಮತ್ತು ಲಾಬಿಗಿರಿಯ ಸಾಧ್ಯತೆಯಿದೆ ಎಂದು ಮಾಧ್ಯಮ ವರದಿಯು ಆರೋಪಿಸಿದೆ.
ಇಂಡಿಯಾ ಫೌಂಡೇಷನ್‌ನ ನಿರ್ದೇಶಕರಾಗಿರುವ ನಾಲ್ವರು ಕೇಂದ್ರ ಸಚಿವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕ್ರಮವನ್ನು ಕೈಗೊಳ್ಳಬೇಕು ಮತ್ತು ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದರು.