ಬ್ರಿಟನ್: ಆಡಳಿತಾರೂಢ ಪಕ್ಷದ ಸಂಸದರ ಅಮಾನತು
Update: 2017-11-04 22:09 IST
ಲಂಡನ್, ನ. 4: ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು ‘ಗಂಭೀರ ಆರೋಪ’ವೊಂದರ ಹಿನ್ನೆಲೆಯಲ್ಲಿ ತನ್ನ ಸಂಸದರೊಬ್ಬರನ್ನು ಅಮಾನತುಗೊಳಿಸಿದೆ.
ಅದೇ ವೇಳೆ, ತನ್ನ ಸಂಸದರ ವಿರುದ್ಧ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಆರೋಪಗಳಿಗೆ ಪ್ರತಿಯಾಗಿ, ಪ್ರಧಾನಿ ತೆರೇಸಾ ಮೇ ಪಕ್ಷಕ್ಕಾಗಿ ನೂತನ ನೀತಿ ಸಂಹಿತೆಯೊಂದನ್ನು ಜಾರಿಗೆ ತಂದಿದ್ದಾರೆ.
‘ಪೊಲೀಸ್ ತನಿಖೆಗೆ ಒಳಪಟ್ಟಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ’ ಸಂಸದ ಚಾರ್ಲಿ ಎಲ್ಫಿಕ್ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮುಖ್ಯ ಸಚೇತಕ ಜೂಲಿಯನ್ ಸ್ಮಿತ್ ತಿಳಿಸಿದರು.
ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈ ವಾರದ ಆದಿ ಭಾಗದಲ್ಲಿ ರಕ್ಷಣಾ ಕಾರ್ಯದರ್ಶಿ ಮೈಕಲ್ ಫಾಲನ್ ರಾಜೀನಾಮೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.