ಆ ರವ ಸೃಷ್ಟಿಸದ ಕೌರವ

Update: 2017-11-04 18:31 GMT

ಒನ್ಸ್ ಮೋರ್ ಕೌರವ ಚಿತ್ರ ತೆರೆಗೆ ಬಂದಿದೆ. ಚಿತ್ರ ತಂಡ ಹೇಳಿದಂತೆ ಇದಕ್ಕೂ ಈ ಹಿಂದೆ ಬಿಡುಗಡೆಯಾದ ಕೌರವ ಚಿತ್ರಕ್ಕೂ ಯಾವುದೇ ಸಂಬಂಧಗಳಿಲ್ಲ.

ಚಿತ್ರದಲ್ಲಿ ಗ್ರಾಮೀಣ ಪ್ರದೇಶವೊಂದಕ್ಕೆ ಹೊಸದಾದ ಬಂದು ಚಾರ್ಜ್ ತೆಗೆದುಕೊಳ್ಳುವ ಪೊಲೀಸ್ ಅಧಿಕಾರಿ ಕಿರಣ್. ಅಲ್ಲಿ ಆತನಿಗೆ ಆಪ್ತವಾಗುವ ಕುರಿಕಾಯುವ ಹುಡುಗಿ ಎಲಿಝಬೆತ್. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದರ್ಬಾರು ನಡೆಸುವ ಒಂದಷ್ಟು ಮಂದಿಯನ್ನು ಎದುರು ಹಾಕಿಕೊಳ್ಳುತ್ತಾನೆ. ಆನಂತರ ಅವರೇ ತನ್ನ ತಂದೆತಾಯಿಯ ಕೊಲೆ ನಡೆಸಿದವರು ಎನ್ನುವ ಸತ್ಯ ಕಿರಣ್‌ಗೆ ಅರಿವಾಗುತ್ತದೆ. ಇಬ್ಬರ ನಡುವಿನ ವೈಮನಸ್ಯಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ಎಲಿಝಬೆತ್ ಕಡೆಯಿಂದ ಪರಿಹಾರ ದೊರೆಯುತ್ತದೆ. ಅದು ಏನು ಎನ್ನುವುದನ್ನು ತೆರೆಯ ಮೇಲೆ ನೋಡಬಹುದು.

ಪೂರ್ತಿ ಚಿತ್ರ ಎಂಬತ್ತರ ಕಾಲಘಟ್ಟದಲ್ಲಿ ನಡೆಯುವಂತಿದೆ ಎನ್ನುವುದು ಇಂದಿನ ವೀಕ್ಷಣೆಗೆ ಮೊದಲ ಹಿನ್ನಡೆ ನೀಡುತ್ತದೆ. ಆದರೆ ಅದೇ ಸಂದರ್ಭದಲ್ಲಿ ಒಂದು ಶಾಂತಮಯ, ಆಕರ್ಷಕ, ಗ್ರಾಮೀಣ ಲೋಕಕ್ಕೆ ಚಿತ್ರ ನಮ್ಮನ್ನು ಕರೆದೊಯ್ಯುತ್ತದೆ ಎನ್ನುವುದು ಅಷ್ಟೇ ಸತ್ಯ ಕೂಡ. ಪೊಲೀಸ್ ಅಧಿಕಾರಿಗೆ ಹಳ್ಳಿ ಹುಡುಗಿ ಮನೆಯಿಂದ ಬುತ್ತಿ ತಂದು ಕೊಡುವುದು, ಆತ ಆಕೆಯ ಮನೆಗೆ ಹೋಗಿ ಉಂಡು ಬರುವುದು ಕ್ಲೀಷೆಯಂತೆ ಕಾಣಿಸುತ್ತದೆ. ಆದರೆ ಇಂಥ ಸನ್ನಿವೇಶಗಳಲ್ಲಿಯೂ ಕಣ್ಮರೆಯಾದ ನಟಿ ಸೌಂದರ್ಯಾರನ್ನು ನೆನಪಿಸುವಂತೆ ನಟಿಸಿದ್ದಾರೆ ನಾಯಕಿ ಅನುಷಾ. ತಂದೆಯೊಂದಿಗಿನ ಜಗ್ಗಾಟದ ಸನ್ನಿವೇಶದಲ್ಲಿಯೂ ಹಳ್ಳಿಯ ನೈಜತೆ ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ನಾಯಕನಾಗಿ ನರೇಶ್ ಗೌಡ ಪೊಲೀಸ್ ಪಾತ್ರಕ್ಕೆ ಒಪ್ಪುವಂತಿದ್ದಾರೆ. ಆದರೆ ಎಲ್ಲ ದೃಶ್ಯಗಳಲ್ಲೂ ಮುಖಭಾವ, ಧ್ವನಿಯಲ್ಲಿ ಏಕತಾನತೆ ಕಾಡುತ್ತದೆ. ಫ್ಯಾಶ್ ಬ್ಯಾಕ್‌ನಲ್ಲಿ ನಾಯಕನ ತಂದೆಯ ಹುಲಿಯಪ್ಪನಾಗಿ ದೇವರಾಜ್ ಘರ್ಜಿಸಿದ್ದಾರೆ. ಉಳಿದಂತೆ ನಾಟಕದ ಮೇಷ್ಟ್ರಾಗಿ ಹಿರಿಯ ನಟ ಉಮೇಶ್ ಪಾತ್ರ ನೆನಪಲ್ಲಿ ಉಳಿಯುತ್ತದೆ. ಶ್ರೀಧರ್ ಸಂಭ್ರಮ್ ಸಂಗೀತ ಮತ್ತು ಕಲ್ಯಾಣ್ ಸಾಹಿತ್ಯದಲ್ಲಿ ಎರಡು ಹಾಡುಗಳು ಮನಸೇರಿಕೊಳ್ಳುತ್ತದೆ. ಕೊನೆಗೂ ನಾಯಕ ನಾಟಕದಲ್ಲಿ ಕೌರವನ ಪಾತ್ರ ನಿರ್ವಹಿಸುತ್ತಾನೆ ಎನ್ನುವ ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ನಟನೆಯಿಂದ ಹೃದಯ ಗೆಲ್ಲುವಂಥ ಒಂದು ಸನ್ನಿವೇಶವನ್ನು ನಾಯಕನಿಗೆ ಸೃಷ್ಟಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ.

 ಒಟ್ಟಿನಲ್ಲಿ ‘ಈ ಹಿಂದೆ ಬರುತ್ತಿದ್ದ ಹಾಗೆ ಗ್ರಾಮೀಣ ಸೊಗಡಿನ ಚಿತ್ರ ಈಗ ಬರುತ್ತಿಲ್ಲ’ ಎಂದು ಯಾವಾಗಲೂ ಮನೆಯಲ್ಲೇ ಕುಳಿತು ಆಪಾದಿಸುವವರು ಖಂಡಿತವಾಗಿ ಥಿಯೇಟರ್‌ಗೆ ಹೋಗಿ ನೋಡಬೇಕಾದ ಚಿತ್ರ ಇದು.

---------------------------
ಚಿತ್ರ: ಒನ್ಸ್ ಮೋರ್ ಕೌರವ
ತಾರಾಗಣ: ನರೇಶ್ ಗೌಡ, ಅನುಷಾ, ದೇವರಾಜ್
ನಿರ್ದೇಶನ: ಎಸ್.ಮಹೇಂದರ್
ನಿರ್ಮಾಣ: ನರೇಶ್ ಗೌಡ

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News