ನಿರ್ಮಲಾ ಸೀತಾರಾಮನ್ ಅರುಣಾಚಲ ಭೇಟಿಗೆ ಚೀನಾ ವಿರೋಧ
ಹೊಸದಿಲ್ಲಿ, ನ.6: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ತೀವ್ರ ವಿರೋಧ ಸೂಚಿಸಿರುವ ಚೀನಾ, ಈ ಭೇಟಿ ‘ವಿವಾದಾಸ್ಪದ ಪ್ರದೇಶ’ದಲ್ಲಿರುವ ಶಾಂತಪರಿಸ್ಥಿತಿಗೆ ತೊಡಕಾಗಲಿದೆ ಎಂದಿದೆ. ಅಲ್ಲದೆ ಉಭಯ ರಾಷ್ಟ್ರಗಳು ‘ವಿವಾದಾಸ್ಪದ ಗಡಿಭಾಗ’ದಲ್ಲಿ ಶಾಂತಿ ನೆಲೆಸುವಂತಾಗಲು ಜತೆಗೂಡಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ.
ವಿವಾದಾಸ್ಪದ ಪ್ರದೇಶಗಳ ಕುರಿತು ಚೀನಾದ ನಿಲುವನ್ನು ನೀವು ಸ್ಪಷ್ಟವಾಗಿ ತಿಳಿದಿರಬೇಕು. ಚೀನಾ- ಭಾರತ ಗಡಿಯ ಪೂರ್ವಭಾಗದಲ್ಲಿ ವಿವಾದವಿದೆ. ಈ ವಿವಾದಾಸ್ಪದ ಪ್ರದೇಶಕ್ಕೆ ಭಾರತದ ಸಚಿವರು ಹಾಗೂ ಇತರರು ಭೇಟಿ ನೀಡಿರುವುದು ಈ ಪ್ರದೇಶದ ಶಾಂತಿ ಹಾಗೂ ನೆಮ್ಮದಿಯ ವಾತಾವರಣಕ್ಕೆ ಪೂರಕವಾಗಿಲ್ಲ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಹುವ ಚುನ್‌ಯಿಂಗ್ ತಮ್ಮ ದೈನಂದಿನ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಾತುಕತೆಯ ಮೂಲಕ ಗಡಿ ವಿವಾದಗಳನ್ನು ಪರಿಹರಿಸಲು ಸೂಕ್ತ ವಾತಾವರಣ ನಿರ್ಮಿಸುವ ಮೂಲಕ ಗಡಿವಿವಾದ ಬಗೆಹರಿಸಲು ಚೀನಾ ನಡೆಸುತ್ತಿರುವ ಪ್ರಯತ್ನಗಳಿಗೆ ಭಾರತ ಸಹಕಾರ ನೀಡುವುದಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಚುನ್‌ಯಿಂಗ್ ಹೇಳಿದ್ದಾರೆ.
ಚೀನಾದ ಗಡಿಗೆ ತಾಗಿಕೊಂಡಿರುವ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗ ಎಂದು ಚೀನಾ ಹೇಳುತ್ತಿದೆ. ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಕ್ಕೆ ಪ್ರಪ್ರಥಮ ಭೇಟಿ ನೀಡಿದ್ದ ನಿರ್ಮಲಾ ಸೀತಾರಾಮನ್, ಅನ್‌ಜಾ ಜಿಲ್ಲೆಯ ನಾಲ್ಕು ಮುಂಚೂಣಿ ಸೇನಾ ನೆಲೆಗಳನ್ನು ಸಂದರ್ಶಿಸಿದ್ದರು.
ಕೆಲ ದಿನಗಳ ಹಿಂದೆ ನಿರ್ಮಲಾ ಸೀತಾರಾಮನ್ ಸಿಕ್ಕಿಂನ ಗಡಿಭಾಗದಲ್ಲಿರುವ ಸೇನಾ ನೆಲೆಗಳಿಗೆ ಭೇಟಿ ನೀಡಿದ್ದಾಗ ಅವರೊಂದಿಗೆ ಚೀನಾದ ಸೈನಿಕರು ಶುಭಾಷಯ ವಿನಿಮಯ ಮಾಡಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಈಗ ರಕ್ಷಣಾ ಸಚಿವೆ ಅರುಣಾಚಲ ಪ್ರದೇಶದ ಸೇನಾ ನೆಲೆಗೆ ಭೇಟಿ ನೀಡಿರುವುದಕ್ಕೆ ಚೀನಾದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವುದು ಗಮನಾರ್ಹವಾಗಿದೆ.