ದಿಲ್ಲಿಯಲ್ಲಿ 'ಆರೋಗ್ಯ ತುರ್ತುಪರಿಸ್ಥಿತಿ' ಘೋಷಿಸಿದ ಐಎಂಎ

Update: 2017-11-07 11:09 GMT

ಹೊಸದಿಲ್ಲಿ,ನ.7 : ರಾಜಧಾನಿಯಾದ್ಯಂತ ಮಂಗಳವಾರ ಹೊಗೆ ತುಂಬಿದಂತಹ ವಾತಾವರಣವಿದ್ದು ಅಲ್ಲಿನ ಹೆಚ್ಚುತ್ತಿರುವ ವಾಯುಮಾಲಿನ್ಯ ಮಟ್ಟವನ್ನು ಗಮನದಲ್ಲಿರಿಸಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಭಾರತೀಯ ವೈದ್ಯಕೀಯ ಸಂಘ ಘೋಷಿಸಿದೆ.

ವಾತಾವರಣದಲ್ಲಿ ಮಾಲಿನ್ಯಕಾರಕಗಳಾದ ಪಿಎಂ2.5 ಅನುಮತಿಸಲ್ಪಟ್ಟ ಮಿತಿ 300ರನ್ನೂ ಮೀರಿ 703 ತಲುಪಿದೆ ಎಂದು ಅಮೆರಿಕಾ ರಾಯಭಾರ ಕಚೇರಿಯ ವೆಬ್‍ಸೈಟಿನಲ್ಲಿ ಕಂಡು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಎಂಎ ಮುಖ್ಯಸ್ಥ ಕಿಶನ್ ಕುಮಾರ್ ಅಗರ್ವಾಲ್ ಹೇಳಿದ್ದಾರಲ್ಲದೆ ವಾಯು ಮಾಲಿನ್ಯ ಗುಣಮಟ್ಟವನ್ನು ಸುಧಾರಿಸಲು ಸಂಬಂಧಿತ ಪ್ರಾಧಿಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಹೇಳಿದ್ದಾರೆ.

ತರುವಾಯ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿರಿಸಿ ನಗರದ ಶಾಲೆಗಳಿಗೆ ಕೆಲ ದಿನಗಳ ಕಾಲ ರಜೆ ಘೋಷಿಸುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ಸೂಚನೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ 2014ರಲ್ಲಿ ಹೊಸದಿಲ್ಲಿಯನ್ನು ವಿಶ್ವದ ಅತ್ಯಂತ ಹೆಚ್ಚು ಮಾಲಿನ್ಯ ಮಟ್ಟವಿರುವ ರಾಷ್ಟ್ರ ರಾಜಧಾನಿ ಎಂದು ಪರಿಗಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News