ನೋಟು ನಿಷೇಧ ‘ಸಂಘಟಿತ ಲೂಟಿ’: ಮನಮೋಹನ್ ಸಿಂಗ್

Update: 2017-11-07 15:13 GMT

ಹೊಸದಿಲ್ಲಿ, ನ. 7: ನವೆಂಬರ್ 8, 2016 ನಮ್ಮ ಆರ್ಥಿಕತೆ ಹಾಗೂ ಪ್ರಜಾಪ್ರಭುತ್ವದ ‘ಕರಾಳ ದಿನ’ ಎಂದು ವ್ಯಾಖ್ಯಾನಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನೋಟು ನಿಷೇಧ ಸಂಘಟಿತ ಹಾಗೂ ಕಾನೂನುಬದ್ಧ ಲೂಟಿ ಎಂದಿದ್ದಾರೆ.

ನೋಟು ನಿಷೇಧದ ಮೊದಲ ವರ್ಷಾಚರಣೆಯ ಮುನ್ನಾ ದಿನವಾದ ಮಂಗಳವಾರ ವಿಧಾನ ಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನ ಅಹ್ಮದಾಬಾದ್‌ನ ಕಾರ್ಯಕ್ರಮವೊಂದರಲ್ಲಿ ವ್ಯಾಪಾರಿಗಳು ಹಾಗೂ ಉದ್ಯಮಿಗಳೊಂದಿಗೆ ಅವರು ಸಂವಹನ ನಡೆಸಿದರು.

ಇಷ್ಟು ಪ್ರಮಾಣದಲ್ಲಿ ಕರೆನ್ಸಿಯನ್ನು ಹಿಂದೆ ಪಡೆಯುವ ಕಠಿಣ ನಿರ್ಧಾರವನ್ನು ಇದುವರೆಗೆ ಜಗತ್ತಿನ ಯಾವುದೇ ದೇಶ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು. ನಗದು ನಿಷೇಧ ಸಂಘಟಿತ ಹಾಗೂ ಕಾನೂನುಬದ್ಧ ಲೂಟಿ ಎಂದು ಕಳೆದ ವರ್ಷ ಸಂಸತ್ತಿನಲ್ಲಿ ಹೇಳಿರುವುದನ್ನು ಪುನರುಚ್ಚರಿಸಿದ ಅವರು, ನಗದು ನಿಷೇಧ ಘೋಷಿಸಿದಾಗ, ಮೋದಿ ಅವರಿಗೆ ಇಂತಹ ಬೇಜವಾಬ್ದಾರಿಯುತ ಸಲಹೆಯನ್ನು ಯಾರು ನೀಡಿದರು ಎಂದು ನನಗೆ ಅಚ್ಚರಿಯಾಗಿತ್ತು ಎಂದರು.

ಸರಕಾರ ನಗದು ರಹಿತ ಆರ್ಥಿಕತೆಗೆ ಉತ್ತೇಜನ ನೀಡಲು ಬಯಸುವುದಾದರೆ, ನಗದು ನಿಷೇಧದಂತಹ ಕ್ರಮಗಳು ಪರಿಣಾಮಕಾರಿಯಲ್ಲ ಎಂದು ಹೇಳಿದ ಅವರು, ನೋಟು ನಿಷೇಧದ ಬಳಿಕ ತೆರಿಗೆ ಭಯೋತ್ಪಾದನೆ ಭಯ ಭಾರತದ ವ್ಯವಹಾರದಲ್ಲಿ ಹೂಡಿಕೆ ಮಾಡುವ ವಿಶ್ವಾಸವನ್ನು ಕುಗ್ಗಿಸಿತು ಎಂದರು.

 ನಗದು ನಿಷೇಧ, ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಭಾರತದ ಆರ್ಥಿಕತೆಗೆ ಹೊಡೆದ ಎರಡು ಗುಂಡುಗಳು ಎಂಬ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ಬೆಂಬಲಿಸಿದ ಮನಮೋಹನ್ ಸಿಂಗ್, ಈ ಎರಡು ಹೊಡೆತ ನಮ್ಮ ಆರ್ಥಿಕತೆಯನ್ನು ವಿನಾಶದೆಡೆಗೆ ದೂಡಿದೆ. ಇದು ಸಣ್ಣ ಉದ್ಯಮ ಬೆನ್ನೆಲುಬನ್ನು ಮುರಿದಿದೆ ಎಂದರು.

 ಜಿಎಸ್‌ಟಿಯನ್ನು ದೋಷಪೂರ್ಣವಾಗಿ ವಿನ್ಯಾಸಗೊಳಿಸಲಾಗಿದೆ, ಅವಸರವಾಗಿ ಅನುಷ್ಠಾನಗೊಳಿಸಲಾಗಿದೆ. ಅದು ಸಂಪೂರ್ಣ ವಿನಾಶಕಾರಿ ಹಾಗೂ ಚಾರಿತ್ರಿಕ ಪ್ರಮಾದ ಎಂದು ಅವರು ಹೇಳಿದರು. ಪ್ರಸಕ್ತ ಜಿಎಸ್‌ಟಿ ಸ್ವರೂಪ ನಮ್ಮ ದೃಷ್ಟಿಕೋನದಿಂದ ನಿರ್ಗಮಿಸಿದೆ ಎಂದು ಹೇಳಿದ ಅವರು, ಜಿಎಸ್‌ಟಿ ಹೆಚ್ಚುವರಿ ಸೆಸ್ ಹಾಗೂ ಬಹು ಸ್ಲಾಬ್‌ನಿಂದ ಗೊಂದಲದ ಗೂಡಾಗಿದೆ ಎಂದರು.

ಕೇಂದ್ರ ಸರಕಾರದ ಮೇಲಿನ ದಾಳಿ ತೀವ್ರಗೊಳಿಸಿದ ಮನಮೋಹನ್ ಸಿಂಗ್, ಎನ್‌ಡಿಎ ಸರಕಾರದ ತಥಾಕಥಿತ ಆರ್ಥಿಕ ಸುಧಾರಣೆ ಚೀನಾಕ್ಕೆ ನೆರವು ನೀಡಿತು. ಇದರಿಂದಾಗಿ ಈ ವರ್ಷ ಚೀನಾದ ರಫ್ತಿನಲ್ಲಿ ಏರಿಕೆಯಾಗಿದೆ ಎಂದರು.

ಚೀನಾದ ರಫ್ತಿನಿಂದಾಗಿ ಭಾರತದಲ್ಲಿ ಉದ್ಯೋಗವಕಾಶ ಇಳಿಕೆಯಾಗಿದೆ. 2016-17ರಲ್ಲಿ ಚೀನಾದಿಂದ ಭಾರತದ ಆಮದು 1.96 ಲಕ್ಷ ಕೋ. ರೂ. ಇತ್ತು. 2017-18ಕ್ಕೆ ಅದು 2.41 ಲಕ್ಷ ಕೋ. ರೂ.ಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ನಗದು ನಿಷೇಧದಿಂದ ಸೂರತ್‌ನ ಜವಳಿ ವಲಯವೊಂದರಲ್ಲೇ 21 ಸಾವಿರ ಉದ್ಯೋಗ ನಷ್ಟವಾಗಿದೆ. ಸೂರತ್‌ನಲ್ಲಿ 60 ಸಾವಿರ ಮಗ್ಗಗಳು ಕಾರ್ಯ ಸ್ಥಗಿತಗೊಳಿಸಿದ್ದು, ಇದರಿಂದ ಒಟ್ಟು 21 ಸಾವಿರ ಉದ್ಯೋಗಿಳು ಕೆಲಸ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News