ನೋಟು ರದ್ದತಿ ದೇಶದ 125 ಕೋಟಿ ಜನರ ಮೇಲು ಎರಗಿದ ಬರಸಿಡಿಲು: ಚಿಂತಕ ಜಿ.ಎನ್.ನಾಗರಾಜ್

Update: 2017-11-08 12:25 GMT

ನೋಟು ರದ್ದತಿ ದೇಶದ 125 ಕೋಟಿ ಜನರ ಮೇಲು ಎರಗಿದ ಬರಸಿಡಿಲು. ತಿಂಗಳುಗಟ್ಟಲೆ ಸಾಮಾನ್ಯ ಜನರ ಜೀವನವನ್ನೆಲ್ಲಾ ಅಸ್ತವ್ಯಸ್ತ ಮಾಡಿ ಹಸಿವು, ಅನವಶ್ಯಕ ಶ್ರಮ, ಸಂಕಟ, ನೂರಾರು ಸಾವುಗಳಿಗೆ ಕಾರಣವಾದ ಕ್ರೌರ್ಯ. ಮದುವೆ, ತಿಥಿ, ಗೃಹಪ್ರವೇಶ, ಆಸ್ಪತ್ರೆಗಳ ರೋಗಿಗಳನ್ನು ಅವರ ಕುಟುಂಬದವರನ್ನು ಕಣ್ಣೀರಿಡುವಂತೆ ಮಾಡಿದ ಸಂಕಟ. ಮನೆ ಕಟ್ಟುತ್ತಿದ್ದವರನ್ನು ಪರದಾಡುವಂತೆ ಮಾಡಿದ, ಹಲವಾರು ತಿಂಗಳು ಕಟ್ಟಡ ಕೆಲಸಗಾರರನ್ನು, ಮಾರುಕಟ್ಟೆ ಹಮಾಲಿಗಳು, ಬೀದಿಬದಿ ವ್ಯಾಪಾರಿಗಳನ್ನು ಪ್ರವಾಸೋದ್ಯಮದಲ್ಲಿ ತೊಡಗಿದವರನ್ನು ಉಪವಾಸಕ್ಕೆ ದೂಡಿದ ಕ್ರಮ.

ರೈತರು ಮಾರುಕಟ್ಟೆಯಲ್ಲಿ ತಮ್ಮ ಬೆಳೆ ಮಾರಾಟ ಮಾಡಲಾಗದೆ ಲಕ್ಷಾಂತರ ರೂ. ನಷ್ಟಕ್ಕೊಳಗಾದ ಘಟನೆ. ಲಕ್ಷಾಂತರ ಸಣ್ಣ, ಮಧ್ಯಮ ಮತ್ತು ಗೃಹ ಕೈಗಾರಿಕೆಗಳು ನಷ್ಟಕ್ಕೆ ದೂಡಲ್ಪಟ್ಟ ಅನರ್ಥಶಾಸ್ತ್ರ. ಆರ್ಥಿಕ ಚಟುವಟಿಕೆಯಿಂದ ತುಂಬಿ ಕಾರ್ಮಿಕರಿಂದ ಗಿಜಿಗುಡುತ್ತಿದ್ದ ನೆಟ್ಟೆಡ್ ಬನಿಯನ್, ಟೀ ಶರ್ಟ್ ತಯಾರಿಕೆಯ ಕೇಂದ್ರ ತಿರುಪ್ಪುರ್, ಸ್ವೆಟರ್‌ಗಳ ತಯಾರಿಕೆಯಲ್ಲಿ ಮನೆ ಮನೆಯೂ ತೊಡಗಿದ್ದ ಲೂಧಿಯಾನಾ ರೀತಿಯ ನೂರಾರು ಕೇಂದ್ರಗಳು ಇಂದು ಕೈಗಾರಿಕಾ ಮರುಭೂಮಿಯಾಗಿವೆ.

ಇಷ್ಟೆಲ್ಲಾ ಯಾಕಾಗಿ? ಮೋದಿ ಬಹು ದೊಡ್ಡ ಗಂಟಲಲ್ಲಿ ಘೋಷಿಸಿದ ಯಾವ ಉದ್ದೇಶಗಳೂ ಈಡೇರಿಲ್ಲ. ಹಾಗಾದರೆ ಮತ್ಯಾಕೆ? ಈ ಬಗ್ಗೆ ನಮ್ಮ ದೇಶದಲ್ಲಿ ಬಹಿರಂಗವಾಗದ ವಿಷಯ ಒಂದಿದೆ.

2008 ರಲ್ಲಿ ಅಮೇರಿಕಾದ ಮತ್ತು ಇತರ ದೇಶಗಳಲ್ಲಿ ಬ್ಯಾಂಕ್ ಕುಸಿತದ ನಂತರ ವಿಶ್ವ ಬ್ಯಾಂಕಿಗೆ ದೊಡ್ಡ ಸಮಸ್ಯೆ ಎದುರಾಯಿತು. ಈ ಸಮಸ್ಯೆಯ ಪರಿಹಾರಕ್ಕಾಗಿ ಅದು ನೇಮಿಸಿದ ಸಮಿತಿಯು 2012 ರಲ್ಲಿ ಸಾಲಗಳ ಬೃಹತ್ ಬಾಕಿಗಳ ಹೊರೆಯಿಂದ ಬ್ಯಾಂಕುಗಳು ಕುಸಿದು ಬೀಳುವುದನ್ನು ತಪ್ಪಿಸಲು ಒಂದು ಕೆಟ್ಟ ವಿಧಾನವನ್ನು ಜಿ.20 ದೇಶಗಳ ಮೇಲೆ ಹೊರೆಸಿತು. ಬ್ಯಾಂಕುಗಳ ಸಾಮಾನ್ಯ ಬಳಕೆದಾರರ ಹಣ ಹೆಚ್ಚು ಹೆಚ್ಚು ಬ್ಯಾಂಕಿಗೆ ಬರುವಂತೆ ಮಾಡಬೇಕು. ಬಂದ ಹಣವನ್ನು ಮರಳಿ ತೆಗೆದುಕೊಳ್ಳಲು ಬಿಡಬಾರದು ಎಂಬ ಕಾನೂನು ವಿರೋಧಿ, ನ್ಯಾಯ ವಿರೋಧಿ ನಿರ್ಬಂಧ ಅದು.

ನಮ್ಮ ದೇಶದಲ್ಲಿ ಬಾಕಿಯಾಗಿದ್ದ 14 ಲಕ್ಷ ಕೋಟಿ, ಮನ್ನಾ ಮಾಡಲಾಗಿದ್ದ 2 ಲಕ್ಷ ಕೋಟಿ ರೂ. ಕಾರ್ಪೋರೆಟ್ ಸಾಲದ ಹೊರೆಯಿಂದ ಕಷ್ಟಕ್ಕೀಡಾಗಿದ್ದ ಬ್ಯಾಂಕುಗಳ ಕುಸಿತಕ್ಕೊಳಗಾಗುವ ಸಂಭವ ಒದಗಿತ್ತು. ಮೋದಿ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡು ಈ ಸಾಲ ವಸೂಲಿ ಮಾಡುವುದಕ್ಕೆ ಬದಲಾಗಿ ಒಂದು ಕಡೆ ಮಲ್ಯಾನಂತಹ 9000 ಕೋಟಿ ರೂ. ಬಾಕೀದಾರರನ್ನು ತಪ್ಪಿಸಿಕೊಂಡು ಪರಾರಿಯಾಗಲು ಬಿಟ್ಟಿತು. ಮತ್ತೊಂದು ಕಡೆ ತನ್ನ ಎಡಗೈ, ಬಲಗೈ ಭಂಟರಾದ ಅದಾನಿ, ಅಂಬಾನಿಯಂತಹ ಕಾರ್ಪೋರೇಟ್‌ಗಳಿಗೆ ಮತ್ತಷ್ಟು ಬೃಹತ್ ಸಾಲಗಳನ್ನು ಒದಗಿಸಲು, ಅಮಿತ್ ಶಾ ಮಗ ಜಯ್ ಶಾನಂತಹವರಿಗೆ ಆಧಾರವಿಲ್ಲದ ಸಾಲ ನೀಡಲು ಒತ್ತಡ ಹಾಕಿತು. ಇವುಗಳ ಫಲವಾಗಿ ಬ್ಯಾಂಕುಗಳು ಮತ್ತಷ್ಟು ಬಿಕ್ಕಟ್ಟಿಗೊಳಗಾದವು. ಅದಕ್ಕೆ ಮೋದಿ ಸರಕಾರ ಕೈಗೊಂಡ ಕ್ರಮವೇ ನೋಟು ರದ್ದತಿ.

ಇದರಿಂದಾಗಿ ಕಾರ್ಪೋರೆಟ್‌ಗಳ ಸಾಲಗಳ ಅನಧಿಕೃತ ಮನ್ನಾ, ಮತ್ತಷ್ಟು ಸಾಲ ಸಿಕ್ಕಿದೆ ಜೊತೆಗೆ ಕ್ಯಾಶ್ ಲೆಸ್ ಎಂಬ ನೆಪದಲ್ಲಿ ಮತ್ತು ನೋಟು ರದ್ದತಿಯಿಂದಾಗಿ ಮುಚ್ಚಿಕೊಂಡ ಗ್ರಾಮೀಣ, ಸಣ್ಣ, ಮದ್ಯಮ ಉದ್ಯಮಗಳ ಸಮಾಧಿಯ ಮೇಲೆ ಬೃಹತ್ ಕಾರ್ಪೋರೆಟ್ ಗಳ ಹೊಸ ದುರ್ಲಾಭ ಸಾಧ್ಯವಾಗಿದೆ.

ಇದರಿಂದಾಗಿ ಕಾರ್ಪೋರೆಟ್‌ಗಳ ಸಾಲಗಳ ಅನಧಿಕೃತ ಮನ್ನಾ, ಮತ್ತಷ್ಟು ಸಾಲ ಸಿಕ್ಕಿದೆ ಜೊತೆಗೆ ಕ್ಯಾಶ್ ಲೆಸ್ ಎಂಬ ನೆಪದಲ್ಲಿ ಮತ್ತು ನೋಟು ರದ್ದತಿಯಿಂದಾಗಿ ಮುಚ್ಚಿಕೊಂಡ ಗ್ರಾಮೀಣ, ಸಣ್ಣ, ಮದ್ಯಮ ಉದ್ಯಮಗಳ ಸಮಾಧಿಯ ಮೇಲೆ ಬೃಹತ್ ಕಾರ್ಪೋರೆಟ್‌ಗಳ ಹೊಸ ದುರ್ಲಾಸ್ಯಾವಾಗಿದೆ. ಹೀಗೆ ನೋಟು ರದ್ದತಿಯೆಂಬುದು ವಿಶ್ವ ಬ್ಯಾಂಕಿನ ಆಣತಿಯಂತೆ ಮೋದಿ ಸರಕಾರ ಹೇರಿದ ದೇಶದ ಜನರಿಗೆ ಬೃಹತ್ ಕಷ್ಟ ಪರಂಪರೆ ಮತ್ತು ಮಾಡಿದ ಬೃಹತ್ ಮೋಸ.
-ಜಿ.ಎನ್.ನಾಗರಾಜ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News