ಆಧಾರ್‌ನೊಂದಿಗೆ ಜೋಡಣೆಯಾಗದಿದ್ದರೆ ಮೊಬೈಲ್ ಸಂಪರ್ಕ ಕಡಿತವಿಲ್ಲ: ದೂ.ಸಂ.ಇಲಾಖೆ
ಹೊಸದಿಲ್ಲಿ,ನ.8: ಮೊಬೈಲ್ ಫೋನ್ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ಜೋಡಣೆ ಗೊಳಿಸುವ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ದೂರಸಂಪರ್ಕ ಇಲಾಖೆಯು ತಿಳಿಸಿದೆ. ಆಧಾರ್‌ಗೆ ಸಂಬಂಧಿತ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನೂ ಬಾಕಿಯಿರುವುದರಿಂದ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗದ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸುವುದಿಲ್ಲ ಎಂದು ಅದು ಭರವಸೆ ನೀಡಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣಾ ಸುಂದರರಾಜನ್ ಅವರು, ಆಧಾರ್‌ನೊಂದಿಗೆ ತಮ್ಮ ಮೊಬೈಲ್ ಸಂಖ್ಯೆಗಳನ್ನು ಜೋಡಣೆಗೊಳಿಸಲು ಬಯಸದವರ ವಿರುದ್ಧ ಕ್ರಮವನ್ನು ನಿರ್ಧರಿಸಲು ಆಧಾರ ಜೋಡಣೆ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪಿಗಾಗಿ ಇಲಾಖೆ ಕಾಯುತ್ತಿದೆ ಎಂದು ತಿಳಿಸಿದರು. ಮೊಬೈಲ್-ಆಧಾರ್ ಜೋಡಣೆಗೆ ಸಂಬಂಧಿತ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ನ.13ರಂದು ವಿಚಾರಣೆಗೆತ್ತಿಕೊಳ್ಳಲಿದೆ.
2018,ಫೆಬ್ರುವರಿಯೊಳಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಜೋಡಣೆಯನ್ನು ಪೂರ್ಣಗೊಳಿಸುವಂತೆ ಕಂಪನಿಗಳಿಗೆ ಗಡುವು ನೀಡಲಾಗಿತ್ತು.
ಸದ್ಯಕ್ಕೆ ಆಧಾರ್‌ನೊಂದಿಗೆ ಜೋಡಣೆ ಮಾಡದ್ದಕ್ಕೆ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸುವ ಯಾವುದೇ ಯೋಜನೆಯಿಲ್ಲ ಎಂದ ಸುಂದರರಾಜನ್, ವಿದೇಶಗಳಲ್ಲಿರುವವರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸಲು ನೆರವಾಗಲು ಪರ್ಯಾಯ ಕ್ರಮಗಳ ಬಗ್ಗೆಯೂ ನಾವು ಚಿಂತನೆ ನಡೆಸಿದ್ದೇವೆ ಎಂದರು.
ತನ್ಮಧ್ಯೆ ಮೊಬೈಲ್ ಸಂಪರ್ಕವನ್ನು ಕಲ್ಪಿಸುವುದು ಸರಕಾರದ ಉದ್ದೇಶವೇ ಹೊರತು ಸಂಪರ್ಕ ಕಡಿತವಲ್ಲ ಎಂದು ಒತ್ತಿ ಹೇಳಿರುವ ಕೇಂದ್ರ ದೂರಸಂಪರ್ಕ ಸಚಿವ ಮನೋಜ ಸಿನ್ಹಾ ಅವರು, ವ್ಯವಸ್ಥೆಯ ಯಾವುದೇ ದುರುಪಯೋಗವನ್ನು ತಡೆಯಲು ಸರಕಾರವು ಬಯಸಿದೆ ಎಂದು ತಿಳಿಸಿದ್ದಾರೆ.