×
Ad

ಆರ್‌ಬಿಐ ದಾಖಲೆಪತ್ರ ಬಿಡುಗಡೆಗೊಳಿಸಲಿ: ಚಿದಂಬರಂ ಆಗ್ರಹ

Update: 2017-11-08 19:11 IST

ಹೊಸದಿಲ್ಲಿ, ನ.8: ಕೇಂದ್ರ ಸರಕಾರದ ನೋಟು ಅಮಾನ್ಯ ನಿರ್ಧಾರಕ್ಕೆ ಒಂದು ವರ್ಷ ಸಂದಿರುವ ಸಂದರ್ಭ , ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಪಾರದರ್ಶಕತೆಯನ್ನು ಬೋಧಿಸುವ ಸರಕಾರ , ನೋಟು ಅಮಾನ್ಯ ನಿರ್ಧಾರದ ಕುರಿತ ಆರ್‌ಬಿಐ ದಾಖಲೆಪತ್ರಗಳನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

  ನೋಟು ಅಮಾನ್ಯ ನಿರ್ಧಾರದ ಕುರಿತು ನಡೆದ ಆರ್‌ಬಿಐ ನಿರ್ದೇಶಕರ ಮಂಡಳಿ ಸಭೆಯ ಕಾರ್ಯಸೂಚಿ(ಅಜೆಂಡ), ಮಾಜಿ ಗವರ್ನರ್ ಡಾ ರಘುರಾಮ್ ರಾಜನ್ ಅವರ ಟಿಪ್ಪಣಿ ಇತ್ಯಾದಿಗಳನ್ನು ಬಹಿರಂಗಗೊಳಿಸಲು ಕೇಂದ್ರ ಸರಕಾರ ಹಿಂಜರಿಯುವುದೇಕೆ ಎಂದವರು ಪ್ರಶ್ನಿಸಿದರು. ಮೋದಿಯವರ ‘ಕರೆನ್ಸಿ ಜೂಜಾಟ’ ಭಾರತದ ಅರ್ಥವ್ಯವಸ್ಥೆಗೆ ಹಾನಿ ಎಸಗಿದೆ ಎಂದು ಬಿಬಿಸಿ ಹೇಳಿದೆ. ಹಾಗಾದರೆ ಬಿಬಿಸಿ ಭ್ರಷ್ಟಾಚಾರ ಹಾಗೂ ಕಪ್ಪುಹಣದ ಸಮರ್ಥಕ ಸಂಸ್ಥೆ ಎನ್ನಲಾದೀತೇ ಎಂದು ಚಿದಂಬರಂ ಪ್ರಶ್ನಿಸಿದರು.

  ಕೇಂದ್ರ ಸರಕಾರದ ನಿರ್ಧಾರದಿಂದಾಗಿ ಸಂಕಷ್ಟಕ್ಕೆ ಈಡಾದ ಮಿಲಿಯಾಂತರ ಜನರಿಗೆ ಒಳಿತಾಗಲೆಂದು ಈ ‘ಕರಾಳ ದಿನ’ದಲ್ಲಿ ಪ್ರಾರ್ಥನೆ ಸಲ್ಲಿಸಬೇಕಾಗಿದೆ ಎಂದ ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂ, ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿವೆ, ಉದ್ಯೋಗ ಕಳೆದುಕೊಂಡ ಜನತೆ ಪರಿತಪಿಸಿರುವುದನ್ನು ಯಾರಾದರೂ ನಿರಾಕರಿಸಲು ಸಾಧ್ಯವೇ ಎಂದು ಟ್ವೀಟ್ ಮಾಡಿದ್ದಾರೆ.

ನೋಟು ಅಮಾನ್ಯದಿಂದ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ದೊರಕಲಿದೆ ಎಂದು ಸರಕಾರ ಹೇಳಿಕೊಂಡಿತ್ತು. ಆದರೆ ಜನತೆಯ ಬಳಿ ಈಗ ಒಟ್ಟು 15 ಲಕ್ಷ ಕೋಟಿ ನಗದು ಇದೆ. ಶೀಘ್ರವೇ ಇದು 2016ರಲ್ಲಿದ್ದ 17 ಲಕ್ಷ ಕೋಟಿಯ ಮಟ್ಟಕ್ಕೆ ತಲುಪಲಿದೆ ಎಂದು ಚಿದಂಬರಂ ನುಡಿದರು. ಚಲಾವಣೆಯಲ್ಲಿ ಎಷ್ಟು ಹಣ ಇರಬೇಕು ಎಂದು ನಿರ್ಧರಿಸುವುದು ಆರ್‌ಬಿಐ, ಸರಕಾರವಲ್ಲ ಎಂದವರು ಹೇಳಿದರು.

 ಚಲಾವಣೆಯಲ್ಲಿದ್ದ ನಗದನ್ನು ಅಸಹಜವಾಗಿ ಕಡಿಮೆಗೊಳಿಸಲು ಪ್ರಯತ್ನಿಸಿರುವುದು ಬೇಡಿಕೆ ಮತ್ತು ಅಭಿವೃದ್ಧಿ ದರ ಕುಸಿಯಲು ಕಾರಣವಾಗಿದೆ . ಕಪ್ಪುಹಣ ನಿವಾರಿಸಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ ಈ ‘ನಿವಾರಿಸಲಾದ’ ಕಪ್ಪುಹಣವನ್ನು ಗುಜರಾತ್ ಚುನಾವಣೆಯ ಪ್ರಚಾರ ಕಾರ್ಯದ ವೇಳೆ ಕಾಣಬಹುದು ಎಂದು ಚಿದಂಬರಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News