ಮುಸ್ಲಿಂ ಕೋಟಾ ಕುರಿತು ಕಾನೂನು ಸಮರಕ್ಕೆ ತೆಲಂಗಾಣ ಸಿದ್ಧ: ಕೆಸಿಆರ್

Update: 2017-11-09 15:58 GMT

ಹೈದರಾಬಾದ್,ನ.9: ಮುಸ್ಲಿಮರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು ಮತ್ತು ಪರಿಶಿಷ್ಟ ಪಂಗಡಗಳಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ದೃಢೀಕರಿಸಲು ಕೇಂದ್ರವು ನಿರಾಕರಿಸಿದರೆ ತೆಲಂಗಾಣವು ಕಾನೂನು ಸಮರವನ್ನು ನಡೆಸಲಿದೆ ಎಂದು ಮುಖ್ಯಮಂತ್ರಿ ಸಿ.ಚಂದ್ರಶೇಖರ ರಾವ್ ಅವರು ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.

ಕೇಂದ್ರವು ರಾಜ್ಯದ ಬೇಡಿಕೆಯನ್ನು ಒಪ್ಪಿಕೊಳ್ಳುತ್ತದೆ ಮತ್ತು ರಾಜ್ಯ ಶಾಸನವನ್ನು ಭಾರತೀಯ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರ್ಪಡೆಗೊಳಿಸುತ್ತದೆ ಎಂದು ತನಗೆ ವಿಶ್ವಾಸವಿದೆ ಎಂದ ಅವರು, ಅಗತ್ಯವಾದರೆ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಲಿದೆ ಎಂದರು. ಆಡಳಿತ ಟಿಆರ್‌ಎಸ್ ಕೂಡ ಸಂಸತ್ತಿನ ಚಳಿಗಾಲದ ಅಧಿವೇಶನನದಲ್ಲಿ ಈ ವಿಷಯವನ್ನೆತ್ತಲಿದೆ ಎಂದರು.

ಹಿಂದುಳಿದ ವರ್ಗಗಳಡಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿಯನ್ನು ಈಗಿನ ಶೇ.4ರಿಂದ ಶೇ.12ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಈಗಿನ ಶೇ.6ರಿಂದ ಶೇ.10ಕ್ಕೆ ಹೆಚ್ಚಿಸಿ ಶಾಸನವೊಂದನ್ನು ವಿಧಾನಸಭೆಯು ಕಳೆದ ಎಪ್ರಿಲ್‌ನಲ್ಲಿ ಅಂಗೀಕರಿಸಿತ್ತು.

ಈ ಶಾಸನವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವುದರಿಂದ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ.

 ಈ ಏರಿಕೆಯಿಂದಾಗಿ ತೆಲಂಗಾಣದಲ್ಲಿ ಒಟ್ಟು ಮೀಸಲಾತಿ ಶೇ.62ಕ್ಕೆ ಹೆಚ್ಚಲಿದೆ. ಹೀಗಾಗಿ ಒಟ್ಟು ಶೇ.69 ಮೀಸಲಾತಿಯನ್ನು ಒದಗಿಸಿರುವ ತಮಿಳುನಾಡಿನ ಪ್ರಕರಣದಲ್ಲಿ ಮಾಡಿರುವಂತೆ ತನ್ನ ಶಾಸನವನ್ನೂ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸುವಂತೆ ತೆಲಂಗಾಣ ಸರಕಾರವು ಕೇಂದ್ರವನ್ನು ಆಗ್ರಹಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಬೇಡಿಕೆಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಸೂಕ್ತ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ರಾವ್ ಸದನದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News