177 ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಶೇ.18ಕ್ಕೆ ಕಡಿತ

Update: 2017-11-10 17:17 GMT

ಹೊಸದಿಲ್ಲಿ,ನ.10: ನೂತನ ರಾಷ್ಟ್ರೀಯ ತೆರಿಗೆ ಜಿಎಸ್‌ಟಿಯಲ್ಲಿ ಭಾರೀ ಪರಿಷ್ಕರಣೆಯನ್ನು ಶುಕ್ರವಾರ ಪ್ರಕಟಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಈಗ ಗರಿಷ್ಠ ತೆರಿಗೆ ದರವಾದ ಶೇ.28ರ ಗುಂಪಿನಲ್ಲಿ ಕೇವಲ 50 ಸರಕುಗಳು ಉಳಿದುಕೊಂಡಿವೆ ಎಂದು ತಿಳಿಸಿದರು. ಇಂದಿನ ಪರಿಷ್ಕರಣೆಯಿಂದಾಗಿ ಶಾಂಪೂ,ಟೂಥಪೇಸ್ಟ್‌ನಂತಹ ದಿನಬಳಕೆಯ ವಸ್ತುಗಳು ಅಗ್ಗವಾಗಲಿವೆ. ನೂತನ ತೆರಿಗೆ ದರಗಳು ನ.15ರಿಂದ ಜಾರಿಗೊಳ್ಳಲಿವೆ.

ಸರಕುಗಳು ಮತ್ತು ಸೇವಾತೆರಿಗೆಗಳ(ಜಿಎಸ್‌ಟಿ) ಮಂಡಳಿಯ 23ನೇ ಸಭೆ ಶುಕ್ರವಾರ ಗುವಾಹಟಿಯಲ್ಲಿ ನಡೆದಿದ್ದು, ಚ್ಯೂಯಿಂಗ್ ಗಮ್‌ನಿಂದ ಹಿಡಿದು ಡಿಟರ್ಜಂಟ್‌ವರೆಗೆ 177 ವಸ್ತುಗಳ ಮೇಲಿನ ತೆರಿಗೆ ದರವನ್ನು ಈಗಿನ ಶೇ.28ರಿಂದ ಶೇ.18ಕ್ಕೆ ತಗ್ಗಿಸಲು ಸಭೆಯು ನಿರ್ಧರಿಸಿದೆ.

ಗರಿಷ್ಠ ಜಿಎಸ್‌ಟಿ ದರವಾಗಿರುವ ಶೇ.28ರ ವ್ಯಾಪ್ತಿಯಲ್ಲಿ 227ರಷ್ಟಿದ್ದ ಸರಕುಗಳ ಸಂಖ್ಯೆ ಮಂಡಳಿಯ ನಿರ್ಧಾರದಿಂದಾಗಿ ಈಗ 50ಕ್ಕೆ ಇಳಿದಿದೆ.

 ತಾರಾ ಹೋಟೆಲ್‌ಗಳನ್ನು ಹೊರತುಪಡಿಸಿ ದೇಶದಲ್ಲಿಯ ಇತರ ಎಲ್ಲ ರೆಸ್ಟೋರಂಟ್ ಗಳಲ್ಲಿ ಶೇ.18ರ ಬದಲು ಶೇ.5 ತೆರಿಗೆಯನ್ನು ವಿಧಿಸಲಾಗುವುದು, ಹೀಗಾಗಿ ರೆಸ್ಟೋರಂಟ್‌ಗಳಲ್ಲಿ ಆಹಾರ ಸೇವನೆ ಅಗ್ಗವಾಗಲಿದೆ.

 ದಿನಬಳಕೆ ವಸ್ತುಗಳನ್ನು ಶೇ.28ರ ಉನ್ನತ ತೆರಿಗೆ ವರ್ಗಕ್ಕೆ ಸೇರಿಸಿದ್ದರ ವಿರುದ್ಧ ರಾಜ್ಯಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಫಿಟ್‌ಮೆಂಟ್ ಸಮಿತಿಯು ಈ ವರ್ಗದಲ್ಲಿ 62 ಸರಕುಗಳನ್ನು ಮಾತ್ರ ಉಳಿಸಿಕೊಂಡು ಇತರ ಸರಕುಗಳ ಮೇಲಿನ ತೆರಿಗೆಯನ್ನು ತಗ್ಗಿಸುವಂತೆ ಮಂಡಳಿಗೆ ಶಿಫಾರಸು ಮಾಡಿತ್ತು. ಆದರೆ ಜಿಎಸ್‌ಟಿ ಮಂಡಳಿಯು ಒಂದು ಹೆಜ್ಜೆ ಮುಂದೆ ಹೋಗಿ ಇನ್ನೂ 12 ವಸ್ತುಗಳನ್ನು ಶೇ.28ರ ತೆರಿಗೆ ವ್ಯಾಪ್ತಿಯಿಂದ ತೆಗೆದು ಶೇ.18ರ ತೆರಿಗೆ ವ್ಯಾಪ್ತಿಗೆ ಸೇರಿಸಿದೆ ಎಂದು ಜಿಎಸ್‌ಟಿ ಸಭೆಯ ನೇಪಥ್ಯದಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ ಕುಮಾರ ಮೋದಿ ತಿಳಿಸಿದರು.

 ಎಲ್ಲ ವಿಧಗಳ ಚ್ಯೂಯಿಂಗ್ ಗಮ್‌ಗಳು, ಚಾಕೊಲೇಟ್‌ಗಳು, ಪ್ರಸಾದನ ಸಾಮಗ್ರಿಗಳು, ವಾಷಿಂಗ್ ಪೌಡರ್ ಡಿಟರ್ಜಂಟ್, ಗ್ರಾನೈಟ್ ಮತ್ತು ಮಾರ್ಬಲ್‌ಗಳ ಮೇಲಿನ ತೆರಿಗೆ ದರ ಈಗ ಶೇ.28ರಿಂದ ಶೇ.18ಕ್ಕಿಳಿದಿದೆ.

 ಬಣ್ಣಗಳು ಮತ್ತು ಸಿಮೆಂಟ್, ವಾಷಿಂಗ್ ಮಷಿನ್ ಮತ್ತು ಏರ್‌ಕಂಡಿಷನರ್‌ಗಳನ್ನು ್ನ ಶೇ.28ರ ತೆರಿಗೆ ಗುಂಪಿನಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಮೋದಿ ತಿಳಿಸಿದರು.

ಜಿಎಸ್‌ಟಿ ಮಂಡಳಿಯ ಶುಕ್ರವಾರದ ನಿರ್ಧಾರದಿಂದಾಗಿ ವಾರ್ಷಿಕ 20,000 ಕೋ.ರೂ.ಗಳ ತೆರಿಗೆ ಆದಾಯ ಖೋತಾ ಆಗಲಿದೆ.

ರಿಟರ್ನ್‌ಗಳ ಸಲ್ಲಿಕೆ ಅವಧಿಯನ್ನೂ ಜಿಎಸ್‌ಟಿ ಮಂಡಳಿಯು ಪುನರ್‌ಪರಿಶೀಲಿಸಿದ್ದು, ಎಲ್ಲ ತೆರಿಗೆದಾರರು ಈಗ ಪ್ರಸಕ್ತ ವರ್ಷದಲ್ಲಿ ಕೇವಲ ಒಂದು ಸೆಟ್ ರಿಟರ್ನ್‌ಗಳನ್ನು ಸಲ್ಲಿಸಿದರೆ ಸಾಕು.

13 ಸರಕುಗಳನ್ನು ಶೇ.18ರ ತೆರಿಗೆ ಗುಂಪಿನಿಂದ ಶೇ.12ರ ಗುಂಪಿಗೆ,ಆರು ಸರಕುಗಳನ್ನು ಶೇ.18ರಿಂದ ಶೇ.5ರ ಗುಂಪಿಗೆ, ಎಂಟು ಸರಕುಗಳನ್ನು ಶೇ.12ರಿಂದ ಶೇ.5ರ ಗುಂಪಿಗೆ ಮತ್ತು ಆರು ಸರಕುಗಳನ್ನು ಶೇ.5ರಿಂದ ಶೂನ್ಯ ತೆರಿಗೆ ಗುಂಪಿಗೆ ಸೇರಿಸಲಾಗಿದೆ ಎಂದೂ ಜೇಟ್ಲಿ ತಿಳಿಸಿದರು.ದೈನಂದಿನ ಬಳಕೆಯ ವಸ್ತುಗಳಿಗೆ ಕಡಿಮೆ ತೆರಿಗೆ ಭಾರ

ಈ ಕೆಳಗಿನ ದೈನಂದಿನ ಬಳಕೆಯ ವಸ್ತುಗಳಿಗೆ ಇನ್ನು ಮುಂದೆ ಶೇ.28ರಷ್ಟು ತೆರಿಗೆ ವಿಧಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಶಾಂಪೂ, ಡಿಯೊಡರೆಂಟ್, ಟೂತ್‌ಪೇಸ್ಟ್, ಶೇವಿಂಗ್ ಕ್ರೀಮ್, ಆಪ್ಟರ್‌ಶೇವ್ ಲೋಷನ್, ಶೂ ಪಾಲಿಷ್, ಚಾಕಲೇಟ್, ಚೂಯಿಂಗ್ ಗಮ್ ಹಾಗೂ ಪೌಷ್ಠಿಕ ಪೇಯಗಳು ಇದರಲ್ಲಿ ಸೇರಿವೆ.

     ಇನ್ನು ಹೋಟೆಲ್‌ಗಳ ವಿಭಾಗದಲ್ಲಿ - ಹೋಟೆಲ್‌ನ ಒಳಗಡೆ ಅಥವಾ ಹೊರಗೆ ಇರುವ ರೆಸ್ಟಾರೆಂಟ್‌ಗಳಿಗೆ ಶೇ.5 ಜಿಎಸ್‌ಟಿ, ಒಂದು ರಾತ್ರಿಯ ರೂಂ ಬಾಡಿಗೆ 7,500 ರೂ. ಅಥವಾ ಅದಕ್ಕಿಂತ ಹೆಚ್ಚು ವಿಧಿಸುವ ಸ್ಟಾರ್ ಹೋಟೆಲ್‌ಗಳಿಗೆ ಜಿಎಸ್‌ಟಿ ದರ ಶೇ.18 ಆಗಿರುತ್ತದೆ. ತೆರಿಗೆ ಕಡಿಮೆಗೊಳಿಸಿದ ಲಾಭವನ್ನು ಹೋಟೆಲ್‌ಗಳು ಗ್ರಾಹಕರಿಗೆ ವರ್ಗಾಯಿಸದಿರುವ ಕಾರಣ ಹೋಟೆಲ್‌ಗಳಿಗೆ ನೀಡಲಾಗಿದ್ದ ಐಟಿಸಿ(ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್- ತೆರಿಗೆ ಕಡಿಮೆಗೊಳಿಸಿದ ಲಾಭ)ಯನ್ನು ಹಿಂಪಡೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಿಎಸ್‌ಟಿಯಲ್ಲಿ ಮಾಡಿರುವ ಈ ಬದಲಾವಣೆಯಿಂದ ಈ ಆರ್ಥಿಕ ವರ್ಷದಲ್ಲಿ ಸರಕಾರದ ಬೊಕ್ಕಸಕ್ಕೆ ಸುಮಾರು 20,000 ಕೋಟಿ ರೂ. ನಷ್ಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಟೀಕೆ-ಪ್ರಶಂಸೆ

ಪ್ರತಿಪಕ್ಷಗಳು ಹೋರಾಡಿ ವಿವಿಧ ವಸ್ತುಗಳ ಜಿಎಸ್‌ಟಿ ದರವನ್ನು ಕಡಿಮೆ ಮಾಡಿಸಿವೆ. ಆದರೆ ಸರಕಾರ ಸಂಪೂರ್ಣವಾಗಿ ಬೆಲೆಗಳನ್ನು ಕಡಿಮೆ ಮಾಡಿಲ್ಲ ಮತ್ತು ಕೆಲವು ವಸ್ತುಗಳು ಈಗಲೂ ಗರಿಷ್ಠ ಶೇಕಡಾ 28ರ ಪಟ್ಟಿಯಲ್ಲೇ ಇದೆ ಎಂದು ಪಶ್ಚಿಮ ಬಂಗಾಳದ ವಿತ್ತ ಸಚಿವಮಿತ್ ಮಿತ್ರಾ ತಿಳಿಸಿದ್ದಾರೆ.

ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಈ ಬಗ್ಗೆ ಜೇಟ್ಲಿಗೆ ಶುಭಾಶಯ ತಿಳಿಸಿದ್ದು, ಜಿಎಸ್‌ಟಿ ಮಂಡಳಿಯ ಇಂದಿನ ಯಶಸ್ವಿ ಸಭೆಗೆ ಶುಭಾಶಯಗಳು. ಶೇಕಡಾ 80ರಷ್ಟು ವಸ್ತುಗಳನ್ನು ಕಡಿಮೆ ಜಿಎಸ್‌ಟಿ ಪಟ್ಟಿಗೆ ಸೇರಿಸಿರುವುದು ಗ್ರಾಹಕರಿಗೆ ಲಾಭದಾಯಕವಾಗಿದೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸೂಕ್ತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷದ ನೋಟ್ ಬ್ಯಾನ್ ಮತ್ತು ಈ ವರ್ಷ ಜಿಎಸ್‌ಟಿಯಿಂದ ಆರ್ಥಿಕವಾಗಿ ಸಂಕಷ್ಟಗಳು ಎದುರಾಗಿವೆ ಎಂಬ ಆರೋಪಗಳ ಮಧ್ಯೆಯೇ ಈ ಬದಲಾವಣೆಗಳನ್ನು ಮಾಡಲಾಗಿದೆ. ರೈಟರ್ಸ್ ಸಮೀಕ್ಷೆ ಪ್ರಕಾರ ಭಾರತದ ಆರ್ಥಿಕತೆಯು ಕಳೆದ ನಾಲ್ಕು ವರ್ಷಗಳಿಗಿಂತ ಮಾರ್ಚ್ 31ಕ್ಕೆ ಕೊನೆಯಾಗುವ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತ್ಯಂತ ನಿಧಾನವಾಗಿ ಬೆಳೆಯಲಿದೆ.

ಬಿಜೆಪಿಯು ಗಬ್ಬರ್ ಸಿಂಗ್ ತೆರಿಗೆ ಹಾಕಲು ನಾವು ಬಿಡುವುದಿಲ್ಲ. ಅವರು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಬೆನ್ನುಮೂಳೆಯನ್ನು ಮುರಿಯುವಂತಿಲ್ಲ ಮತ್ತು ಅಸಂಘಟಿತ ಕ್ಷೇತ್ರವನ್ನು ನಾಶಪಡಿಸುವ ಮೂಲಕ ಲಕ್ಷಾಂತರ ಉದ್ಯೋಗವನ್ನು ಅಳಿಸುವಂತಿಲ್ಲ ಎಂದು ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜಿಎಸ್‌ಟಿ ಸಭೆಗೂ ಮುನ್ನ ಟ್ವೀಟ್ ಮಾಡಿದ್ದರು.

ಗುಜರಾತ್‌ನ ಸಣ್ಣ ವ್ಯಾಪಾರಸ್ಥರು ಹೊಸ ತೆರಿಗೆ ನೀತಿಯಿಂದ ಅಸಮಾಧಾನ ಹೊಂದಿದ್ದು, ಮುಂದಿನ ತಿಂಗಳು ಅಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿಯಲ್ಲಿ ಬದಲಾವಣೆಗಳನ್ನು ಮಾಡಲು ಬಿಜೆಪಿ ಸರಕಾರ ಮುಂದಾಗಿದೆ ಎಂದು ಕಾಂಗ್ರೇಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News